
ಸೈದಾಪುರ:ಜು.23:ಸಂಚಾರಿ ನಿಯಮಗಳನ್ನು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ನಿಯಮಗಳ ಪಾಲನೆ ಅತಿ ಮುಖ್ಯವಾಗಿದೆ. ಇದರಿಂದ ಉತ್ತಮ ಸಮಾಜವನ್ನು ಕಂಡು ಕೊಳ್ಳಲು ಸಾಧ್ಯ ಎಂದು ಡಿವಾಯಎಸ್‍ಪಿ ಬಸವೇಶ್ವರ ಹಿರ ಅಭಿಪ್ರಾಯಪಟ್ಟರು.
ಪಟ್ಟಣದ ಪೊಲೀಸ ಠಾಣೆಯಲ್ಲಿ ಹಮ್ಮಿಕೊಂಡ ಜನ ಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಸ್ಯೆಗಳಿದ್ದರೆ ತಕ್ಷಣ ಬಗೆಹರಿಸಲು 112 ಸೇವೆಯನ್ನು ಸರಕಾರದಿಂದ ಕಲ್ಪಿಸಲಾಗಿದೆ. ಸಾರ್ವಜನಿಕರು ಕರೆ ಮಾಡಿದರೆ 15 ರಿಂದ 20 ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕೆ ಬಂದು ಸಮಸ್ಯೆ ಬಗೆ ಹರಿಸುತ್ತಾರೆ. ಎಲ್ಲಾ ದೂರುಗಳು ಠಾಣೆಗೆ ಸಂಬಂದಿಸಿರುವುದಿಲ್ಲಾ. ಮಧ್ಯ ಮರಾಟ ಅಬಕಾರಿ ಇಲಾಖೆಗೆ, ಭೂ ಸಮಸ್ಯೆಗಳಿದ್ದರೆ ಕಂದಾಯ ಇಲಾಖೆಗಳ ವ್ಯಾಪ್ತಿಗೆ ಬರುತ್ತದೆ. ಇದಕ್ಕೆ ಸಂಬಂದ ಪಟ್ಟಂತೆ ಠಾಣೆಗೆ ಭೇಟಿ ನೀಡಿದರೆ ಸಿಬ್ಬಂದಿಗಳು ಮಾಹಿತಿ ನೀಡುತ್ತಾರೆ ಎಂದು ಹೇಳಿದರು. ಯಾವುದೇ ಸಮಸ್ಯೆಗಳಿದ್ದರೂ ನಮ್ಮ ಗಮನಕ್ಕೆ ತಂದರೆ ಕೂಡಲೇ ಸಂಬಂದ ಪಟ್ಟ ಇಲಾಖೆಗೆ ತಿಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಸಲಹೆ ನೀಡಿದರು.
ಠಾಣೆಯ ಆರಕ್ಷಕ ನಿರೀಕ್ಷಕರಾದ ಕಾಳಪ್ಪ ಬಡಿಗೇರ್, ಆರಕ್ಷಕ ಉಪನಿರೀಕ್ಷಕ ಹನುಮಂತರಾಯ, ಸಿಬ್ಬಂದಿ ವರ್ಗ, ಗ್ರಾಮಸ್ಥರು ಸೇರಿದಂತೆ ಇತರರಿದ್ದರು.