“ಕಾನೂನು ತಿಳಿಯಿರಿ ಅರಿವಿನಿಂದ ನಡೆಯಿರಿ, ಕಾನೂನು ಎಲ್ಲರಿಗೂ ದೊಡ್ಡದು”


ಸಂಜೆವಾಣಿ ವಾರ್ತೆ
 ಸಿರಿಗೇರಿ.ಮೇ, 18. ಎಲ್ಲರೂ ಕಾನೂನು ತಿಳಿದುಕೊಂಡು ಅರಿವಿನಿಂದ ಬಾಳಬೇಕಾಗಿದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಎಂದು ಸಿರುಗುಪ್ಪ ತಾಲೂಕು ಸಿರಿಗೇರಿ ಪೋಲಿಸ್ ಠಾಣೆಯ ಕ್ರೈಂಬ್ರಾಂಚ್ ಪಿಎಸ್‍ಐ ಶ್ರೀಮತಿ ನರಸಮ್ಮನಾಯಕ ಇವರು ತಿಳಿಸಿದರು. ಮೇ.16 ರಂದು ಸಮೀಪದ ಮುದ್ದಟನೂರು ನವಗ್ರಾಮದಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ತೆರೆದಮನೆ ಕಾರ್ಯಕ್ರಮದ ಭಾಗದ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಇರಬೇಕು, ಪರಿಚಯವಿಲ್ಲದವರು ನೀವು ಒಂಟಿಯಾಗಿದ್ದಾಗ ಬಂದು ಚಾಕ್‍ಲೇಟ್ ಇತರೆ ತಿನಿಸುಗಳನ್ನು ಕೊಟ್ಟರೆ ತಿನ್ನಬಾರದು, ಒಂಟಿಯಾಗಿ ನಿರ್ಜನ ಪ್ರದೇಶಗಳಲ್ಲಿ ತಿರುಗಾಡಬಾರದು. ಖಾಲಿಸಮಯವನ್ನು ಓದಿನಲ್ಲಿಯೇ ಕಳೆಯಬೇಕೆಂದು ತಿಳಿಸಿದರು. ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಎಚ್.ಲಕ್ಷ್ಮಣಭಂಡಾರಿ ಮಾತನಾಡಿ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ನಿಜ. ಇಂತಹ ಸುಬದ್ರವಾದ ಕಾನೂನನ್ನು ನಮ್ಮ ದೇಶಕ್ಕೆ ಸಂವಿಧಾನದಲ್ಲಿ ಅಳವಡಿಸಿದ ಡಾ.ಬಿ.ಆರ್.ಅಂಬೇಡ್ಕರ್ ರವರು ದೊಡ್ಡವರು ಎನ್ನುವ ಭಾವನೆ ನನ್ನದು, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ವಿದ್ಯಾಭ್ಯಾಸದಲ್ಲಿ ತೊಡಗಿ ಪದವಿಗಳನ್ನು ಪಡೆದು ಅವರಂತೆ ದೊಡ್ಡ ಮೇಧಾವಿಗಳಾಗಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಗುರು ಗೋವಿಂದರಾಜು, ಆರೋಗ್ಯ ಇಲಾಖೆಯ ತಾನೇಶ್, ಇವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ವಕೀಲ ರಾಂಬಾಬು ಕಾರ್ಯಕ್ರಮ ನಿರೂಪಿಸಿದರು. ಅಂಬೇಡ್ಕರ್ ಸಂಘದ ಯುವಕರಾದ ಮಾರೇಶ ಮತ್ತು ವೀರೇಶ ನಿರ್ವಹಿಸಿದರು. ಶಿಕ್ಷಣಪ್ರೇಮಿ ಎಲ್ಲಪ್ಪ ಇವರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಸ್ಥಳೀಯ ಕೃಷ್ಣಪ್ಪ, ಎರಿಸ್ವಾಮಿ, ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು, ಆಶಾಕಾರ್ಯಕರ್ತರು ಇದ್ದರು.
ಪೋಟೋ:- ನವಗ್ರಾಮದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಿಎಸ್‍ಐ ಮಾತನಾಡಿದರು.