ಕಾನೂನು ಗಾಳಿಗೆ ತೂರಿ ಹೊರ ಗುತ್ತಿಗೆ ನೌಕರನ ವಜಾ

ದಾವಣಗೆರೆ ನ 9 : ಕಾರ್ಮಿಕ ಕಾನೂನುಗಳನ್ನು ಗಾಳಿಗೆ ತೂರುವ ಮೂಲಕ ದಾವಣಗೆರೆ ಮಹಾನಗರ ಪಾಲಿಕೆಯ ಆಯುಕ್ತ ವಿಶ್ವನಾಥ ಮುದ್ದಜ್ಜಿ ಅವರು ಹೊರಗುತ್ತಿಗೆ ನೌಕರರನ್ನು ಏಕಾಏಕಿ ಕಿತ್ತು ಹಾಕುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಪಾಲಿಕೆ,ನಗರಸಭೆ, ಪುರಸಭೆ, ಪಟ್ಟಣಪಂಚಾಯಿತಿ ಹೊರ ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣ ಗೌಡ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದಾವಣಗೆರೆ ಮಹಾಗನಗರ ಪಾಲಿಕೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ದುರ್ಗೇಶ್ ಅವರು ಸಂಘಟನೆಯಲ್ಲಿ ಸಕ್ರಿಯವಾಗಿರುವ ಕಾರಣಕ್ಕೆ ಇವರು ಅಧಿಕಾರಿಗಳ ಆಕ್ರಮಗಳನ್ನು ಪ್ರಶ್ನಿಸುತ್ತಾರೆ ಹಾಗೂ ನೌಕರರ ಹಕ್ಕುಗಳ ಬಗ್ಗೆ ಪ್ರತಿಪಾದನೆ ಮಾಡುತ್ತಾರೆ ಎಂಬ ಏಕೈಕ ಕಾರಣಕ್ಕೆ ಇವರಿಗೆ ಯಾವುದೇ ನೋಟಿಸ್ ನೀಡದೆ ಏಕಾಏಕಿ ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ದೂರಿದರು.ಈ ಬಗ್ಗೆ ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ಅವರಿಗೆ ದೂರು ನೀಡಲಾಗಿದೆ. ಅಲ್ಲದೇ ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿಗೂ ದುರ್ಗೇಶ ಅವರನ್ನು ಮರುನಿಯೋಜನೆ ಮಾಡಿಕೊಳ್ಳುವಂತೆ ಮನವಿ ಸಲ್ಲಿಸಲಾಗಿದೆ. ಇನ್ನು ಒಂದು ವಾರದಲ್ಲಿ ದುರ್ಗೇಶ್ ಅವರನ್ನು ಮರು ನಿಯೋಜಿಸಿಕೊಳ್ಳದಿದ್ದರೆ. ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಹೊರಗುತ್ತಿಗೆ ನೌಕರರ ಮತ್ತು ಕಾರ್ಮಿಕರ ಮೇಲೆ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿರುವುದಕ್ಕೆ ಕಡಿವಾಣ ಹಾಕಬೇಕಾದರೆ ರಾಜ್ಯ ಸರಕಾರ ರಾಜ್ಯದ 288 ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಹನ ಚಾಲಕರು, ವಾಟರ್ ಮೇನ್ ಡಾಟ್ ಎಂಟ್ರಿ ಆಪರೇಟರ್‌ಗಳನ್ನು ನೇರ ವೇತನಕ್ಕೆ ಒಳಪಡಿಸುವ ಮೂಲಕ ಏಜೆನ್ಸಿಗಳಿಗೆ ರಾಜ್ಯ ಸರಕಾರ ನೌಕರರ ವೇತನದ ಶೇ 5 ಸೇವಾ ಶುಲ್ಕ ಹಾಗೂ ಶೇ 18 ರಷ್ಟು ಜಿಎಸ್‌ಟಿಯನ್ನು ಉಳಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹರಿಹರ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಕರೋನಾ ಸಂದರ್ಭದಲ್ಲಿ ಹೀಗೆ ಅಧಿಕಾರಿಗಳು ನೌಕರರನ್ನು ವಜಾಗೊಳಿಸಿದರೆ ಜೀವನ ಹೇಗೆ ನಡೆಸಬೇಕು, ತಕ್ಷಣವೇ ದುರ್ಗೇಶ ಅವರನ್ನು ಮರುನಿಯೋಜನೆ ಮಾಡಿಕೊಳ್ಳಬೇಕು ಇಲ್ಲದಿದ್ದರೆ ದಲಿತ ಸಂಘರ್ಷ ಸಮಿತಿಯಿಂದ ಆರೆ ಬೆತ್ತಲೆ ಮೆರವಣೆಗೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್, ದುರ್ಗೇಶ್, ವಿಜಯಮ್ಮ ಇತರರು ಇದ್ದರು.