ಕಾನೂನು ಕೈಗೆತ್ತಿಕೊಂಡರೆ ಕ್ರಮ

ಬೆಂಗಳೂರು, ಜ. ೩೦- ಕಾನೂನು ವಿರುದ್ಧ ಯಾರೇ ನಡೆದುಕೊಂಡರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಮಂಡ್ಯದ ಕೆರಗೋಡುವಿನಲ್ಲಿ ನಡೆದ ಹನುಮಧ್ವಜ ವಿವಾದದ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ- ಜೆಡಿಎಸ್ ಎಲ್ಲಿ ಬೇಕಾದರೂ ಪ್ರತಿಭಟನೆ ಮಾಡಲಿ ಕಾನೂನು ಚೌಕಟ್ಟಿನಲ್ಲಿನ ಏನು ಮಾಡಿದರೂ ನಾವು ಅವರನ್ನು ಮಾತನಾಡಿಸಲ್ಲ. ಕಾನೂನು ಬಿಟ್ಟು ಕೆಲಸ ಮಾಡಿದರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೆರಗೋಡುವಿನಲ್ಲಿ ಹನುಮಧ್ವಜ ವಿಚಾರವನ್ನು ಅನಗತ್ಯವಾಗಿ ವಿವಾದ ಮಾಡಲಾಗಿದೆ. ಧ್ವಜ ಸ್ತಂಬದಲ್ಲಿ ಧ್ವಜ ಹಾರಿಸಲು ಅನುಮತಿ ಕೇಳಿದ ಸಂದರ್ಭದಲ್ಲಿ ಪಂಚಾಯ್ತಿ ಯವರು ರಾಷ್ಟ್ರ ಮತ್ತು ರಾಜ್ಯ ಧ್ವಜ ಬಿಟ್ಟು ಬೇರೆ ಧ್ವಜ ಹಾಕಬಾರದೆ ಎಂಬ ಷರತ್ತಿನ ಮೇಲೆ ಮುಚ್ಚಳಿಕೆ ಬರೆಸಿಕೊಂಡೇ ಅನುಮತಿ ಕೊಟ್ಟಿದ್ದಾರೆ. ಆದರೇ ಇವರು ಅದನ್ನು ಉಲ್ಲಂಘಿಸಿ ಹನುಮ ಧ್ವಜ ಹಾರಿಸಿದ್ದಾರೆ ಇದು ಸರಿನಾ ಎಂದು ಪ್ರಶ್ನಿಸಿದರು.
ನಾವು ಹನುಮ ಭಕ್ತರೇ. ನಮಗೆಲ್ಲರಿಗೂ ಹನುಮ ದೇವರು. ಆದರೆ ದೇಶದ ಕಾನೂನು ಒಂದೇ. ಸರ್ಕಾರಿ ಜಾಗದಲ್ಲಿ ಹೋಗಿ ಧಾರ್ಮಿಕ ಧ್ವಜ ಹಾಕುವುದು ಸರಿಯಲ್ಲ. ನಮ್ಮ ಮನೆಯಲ್ಲೋ, ಸ್ವಂತ ಜಾಗದಲ್ಲೋ ದೇವಸ್ಥಾನದಲ್ಲಿ ಧಾರ್ಮಿಕ ಧ್ವಜ ಹಾಕುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಧ್ವಜ ಹಾಕಿ ಸರ್ಕಾರವನ್ನು ದೋಷಣೆ ಮಾಡಿ ಪ್ರತಿಭಟನೆ ಮಾಡುವುದು ಸರಿಯಲ್ಲ. ಹೀಗಾಗಿಯೇ ಕೆರಗೋಡುವಿನಲ್ಲಿ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸರ ಕ್ರಮವನ್ನು ಗೃಹ ಸಚಿವರು ಸಮರ್ಥಿಸಿಕೊಂಡರು.