ಕಾನೂನು ಅರಿವು ನೆರವು ಕಾರ್ಯಕ್ರಮ

ಕಲಬುರಗಿ: ಮಾ.3:ಬುದ್ಧ ವಿಹಾರ, ತಾರಫೈಲ್ ಬಡಾವಣೆಯಲ್ಲಿ ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ನವನಗರ ಹುಬ್ಬಳ್ಳಿ, ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ ಸಿದ್ಧಾರ್ಥ ಕಾನೂನು ಅರಿವು-ನೆರವು ಘಟಕ, ಕಲಬುರಗಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಲಬುರಗಿ ಸಂಯುಕ್ತಾಶ್ರಯದಲ್ಲಿ ” ಕಾನೂನು ಅರವು-ನೆರವು ” ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯ ಪ್ರಾಂಶುಪಾಲ ಡಾ: ಎಸ್ ಚಂದ್ರಶೇಖರ್ ಪ್ರಾಸ್ತಾವಿಕ ಹಾಗೂ ಸ್ವಾಗತವನ್ನು ಕೋರುತ್ತಾ ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ಹೇಳುತ್ತಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನ ವಾಸಿಸುವಂತಹ ಸ್ಥಳಕ್ಕೆ ಹೋಗಿ ಕಾನೂನಿನ ಅರಿವು ಕೊಡುವದಾಗಿರುತ್ತದೆ. ಅಂದರೆ ಸಂವಿಧಾನದಲ್ಲಿ ಇರುವಂತಹ ಬಹು ಮುಖ್ಯವಾದ ಅಂಶಗಳನ್ನು ತಿಳಿಸುವುದು, ಮತದಾನದ ಜಾಗ್ರತೆಯ ಬಗ್ಗೆ ತಿಳಿಸುವುದು 14 ವರುಷದ ಒಳಗೆ ಇರುವಂತಹ ಮಕ್ಕಳಿಗೆ ಕಡ್ಡಾಯ ಶಿಕ್ಷಣವನ್ನು ಕೊಡಿಸಲಿಕ್ಕೆ ಹೇಳುವುದು ವರದಕ್ಷಣೆ ಕಿರುಕುಳಕ್ಕೆ ಸಂಬಂಧಪಟ್ಟಂತಹ ಕಾನೂನುಗಳನ್ನು ತಿಳಿಸುವುದಾಗಿರುತ್ತದೆ ಎಂದು ತಿಳಿಸಿದರು ಮತ್ತು “ಒಬ್ಬ ಮಹಿಳೆ ಕಲಿತರೇ ಸಮಾಜವೇ ಕಲಿತಂತೆ ” ಎಂದು ಸಂದೇಶವನ್ನು ಕೊಟ್ಟರು.
ಜಿಲ್ಲಾ ಗ್ರಾಹಕರ ಸಂರಕ್ಷಣಾ ವೇದಿಕೆಯ ಅಧ್ಯಕ್ಷೆ ಮಾಲತಿ ಗುರಣ್ಣಾ (ರೇಷ್ಮಿ) ಅವರು ಈ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳಿಗೆ ಮೊಬೈಲಗಿಂತ ಉತ್ತಮವಾದ ಶಿಕ್ಷಣವನ್ನು ಕೊಡುವುದು ಎಲ್ಲ ತಂದೆ-ತಾಯಿಗಳ ಹಾಗೂ ಸಮಾಜದ ಕರ್ತವ್ಯವೆಂದು ತಿಳಿ ಹೇಳಿದರು. ಅಲ್ಲದೇ ಮದುವೆ ಮಾಡಲಕ್ಕೆ ಸಾಲವನ್ನು ಮಾಡಬಾರದು ಇದರಿಂದ ಅವರ ಜೀವನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾ ವರದಕ್ಷಿಣೆ ಕೊಡುವುದನ್ನು ಹಾಗೂ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕೆಂದು ಹೇಳಿದರು. ಭ್ರೂಣ ಹತ್ಯೆ ನಿಷೇಧ ಕಾನೂನಿನ ಬಗ್ಗೆ, ಸಂಚಾರಿ ನಿಯಮಗಳ ಬಗ್ಗೆ ಅಲ್ಲದೇ ಹಿರಿಯ ನಾಗರಿಕ ಕಾಯ್ದೆ ಬಗ್ಗೆ ಮಾಹಿತಿಯನ್ನು ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಲಬುರಗಿಯಿಂದ ಪ್ರತಿನಿಧಿಸಲ್ಪಟ್ಟ ಗಣಪತರಾವ ಅಂಕಲಗಿ ನ್ಯಾಯವಾದಿಗಳು ಮಾತನಾಡಿ ನ್ಯಾಯಾಲಯವೇ ನಿಮ್ಮ ಮನೆಯ ಬಾಗಿಲಿಗೆ ಬಂದಿದೆ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು, ಅಲ್ಲದೇ ಜನನ, ಮರಣ ಪ್ರಮಾಣ ಪತ್ರಗಳನ್ನು ಉಚಿತವಾಗಿ ಯಾವುದೇ ಶುಲ್ಕವಿಲ್ಲದೇ ಕಾನೂನು ಸೇವಾ ಪ್ರಾಧಿಕಾರದಲ್ಲಿ ದೊರೆಯುತ್ತದೆ ಎಂದು ತಿಳಿಸಿದರು. ಅಲ್ಲದೇ ಹೆಣ್ಣು ಮಕ್ಕಳ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲರಾಗಬೇಕೆಂದರೆ ಶಿಕ್ಷಣವೇ ಮುಖ್ಯ ಎಂದು ಸಂದೇಶ ಕೊಟ್ಟರು.
ಕಾರ್ಯಕ್ರಮದ ವಂದಾನಾರ್ಪಣೆಯನ್ನು ಮಹಾವಿದ್ಯಾಲಯದ ಡಾ| ಅಪರ್ಣಾ ಜೆ ಶಿಂಧೆ ನೆರವೇರಿಸುತ್ತಾ ಸೇರಿದಂತಹ ಜನಗಳಿಗೆ ನಾವುಗಳು ಬಹಳ ಪರಿಶ್ರಮ ಹಾಗೂ ಒಳ್ಳೆಯ ಶಿಕ್ಷಣ ಪಡೆದಾಗ ಮಾತ್ರ ನಮ್ಮ ಬದುಕು ಚನ್ನಾಗಿ ಇರುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ಮಹಾತ್ಮ ಜ್ಯೋತಿಬಾಪುಲೆ ತರುಣ ಸಂಘದ ಅಧ್ಯಕ್ಷ ಸಂದೇಶ ವಾಘಮಾರ ಅಧ್ಯಕ್ಷತೆ ವಹಿಸಿದರು. ಈ ಕಾರ್ಯಕ್ರಮದಲ್ಲಿ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದ ಎನ.ಎಸ್.ಎಸ್ ಹಾಗೂ ಕಾನೂನು ಅರಿವು ನೆರವು ಕೇಂದ್ರದ ಸಂಯೋಜಕರಾದ ಡಾ: ತಿಪ್ಪೇಸ್ವಾಮಿ ಸೇರಿದಂತೆ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು, ತಾರಫೈಲ್ ಬಡಾವಣೆಯ ಸಾರ್ವಜನಿಕರು ಉಪಸ್ಥಿತಿ ಇದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಯಾದ ಸುಮಿತ ಕಾಂಬಳೆಯವರು ನಡೆಸಿಕೊಟ್ಟರು.