ಕಾನೂನು ಅರಿವು-ನೆರವು ಕಾರ್ಯಕ್ರಮ

ಧಾರವಾಡ, ಆ19: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಮಕ್ಕಳ ರಕ್ಷಣಾ ನಿರ್ದೆಶನಾಲಯ, ಬೆಂಗಳೂರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಯುನಿರ್ವಸಿಟಿ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ಹಕ್ಕುಗಳು ಹಾಗೂ ಸಂತ್ರಸ್ಥರ ಪರಿಹಾರ ಕಾಯ್ದೆ ಕುರಿತು ವಿದ್ಯಾರ್ಥಿಗಳಿಗೆ ಕಾನೂನು ಅರಿವು-ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಪರಶುರಾಮ ದೊಡ್ಡಮನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಮಕ್ಕಳೆ ಇಂದಿನ ಪ್ರಜೆಗಳು. ಮಕ್ಕಳಿಗಾಗಿ ಇರುವ ವಿವಿಧ ಕಾನೂನುಗಳ ಕುರಿತು ಅರಿವು ತುಂಬಾ ಮುಖ್ಯವಾಗಿರುತ್ತದೆ. ಇದರೊಂದಿಗೆ ಕೆಲವು ಶಾಲೆಗಳಲ್ಲಿನ ಮಕ್ಕಳು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ ಇದರಿಂದ ಮಕ್ಕಳನ್ನು ರಕ್ಷಿಸುವುದು ಶಾಲಾ ಶಿಕ್ಷಕರ ಹಾಗೂ ಪಾಲಕರ ಪಾತ್ರ ತುಂಬಾ ಮುಖ್ಯ. ಪ್ರತಿಯೊಂದು ಮಗುವಿಗೆ ಜನನ ಪ್ರಮಾಣ ಪತ್ರ ತುಂಬಾ ಮುಖ್ಯ ದಾಖಲಾತಿ. ಜನನ ಪ್ರಮಾಣ ಪತ್ರದಲ್ಲಿ ವ್ಯತ್ಯಾಸವಾಗದೇ ಒಂದೇ ರೀತಿಯ ಪ್ರಮಾಣ ಪತ್ರಗಳು ಇರಬೇಕು. ಮರಣ ಹೊಂದುವ ಪ್ರತಿಯೊಂದು ನಾಗರಿಕನಿಗೂ ಮರಣ ಪ್ರಮಾಣ ಪತ್ರ ಅವಶ್ಯಕತೆ ಇರುತ್ತದೆ. ಮಕ್ಕಳು ನಮ್ಮ ದೇಶದ ಆಸ್ತಿ ಸದೃಡ ಸಮಾಜ ನಿರ್ಮಾಣವಾಗಬೇಕಾದರೆ ಮಕ್ಕಳ ಉತ್ತಮ ಬೆಳವಣಿಗೆ ತುಂಬಾ ಅವಶ್ಯ. ಮಕ್ಕಳು ಮೊಬೈಲ್‍ನಲ್ಲಿ ಆಟವಾಡುವುದನ್ನು ಬಿಟ್ಟು ಮೈದಾನದಲ್ಲಿ ಆಟವಾಡುವ ಹಾಗೆ ಆಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಉತ್ತಮ ಆರೋಗ್ಯ ಒದಗಿಸುವುದು ಎಲ್ಲ ಜವಾಬ್ದಾರಿಯಾಗಿದೆ ಎಂದು ಶಿಕ್ಷಕರಿಗೆ ಮತ್ತು ಮಕ್ಕಳಿಗೆ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಎಸ್.ಎಂ ಹುಡೇದಮನಿ ಮಾತನಾಡಿ, ಮಕ್ಕಳು ದುಶ್ಚಟಗಳಿಗಳಿಗೆ ಬಲಿಯಾಗದೇ ಓದಿನ ಹವ್ಯಾಸವನ್ನು ಬೆಳೆಸಿಕೊಂಡು ಉತ್ತಮ ರೀತಿಯಲ್ಲಿ ಸಾಧನೆ ಮಾಡಿ ದೇಶದ ಸತ್ಪ್ರಜೆ ಆಗುವಂತೆ ತಿಳಿಸಿದರು. ವಿದ್ಯೆಯಿಲ್ಲದವನ ಮುಖ ಹಾಳೂರು ಹದ್ದಿನಂತೆ ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲಿ ತೊಡಗಬೇಕು. ಶಾಲೆಯಲ್ಲಿ ಯಾವುದೇ ವಿದ್ಯಾರ್ಥಿಯು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಕಂಡು ಬಂದರೆ ಶಾಲಾ ಮುಖ್ಯೋಪಾದ್ಯಯರು ಹಾಗೂ ಸಹಶಿಕ್ಷಕರ ಗಮನಕ್ಕೆ ತಂದು ವಿದ್ಯಾರ್ಥಿಯು ದುಶ್ಚಟಕ್ಕೆ ಬಲಿಯಾಗದಂತೆ ಕ್ರಮ ವಹಿಸಲು ತಿಳಿಸಿದರು. ಮಕ್ಕಳಲ್ಲಿ ಅನಾರೋಗ್ಯದ ತೊಂದರೆ ಕಂಡುಬಂದರೆ ಆರ್‍ಬಿಎಸ್‍ಕೆ ಯೋಜನೆಯಡಿಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಿ ಉಚಿತವಾಗಿ ಉಪಾಚಾರವನ್ನು ಪಡೆಯಬಹುದು. ಮಕ್ಕಳಿಗೆ ದೈಹಿಕ ತೊಂದರೆಯಾದರೆ, ಅಪಘಾತವಾದರೆ ಶಿಕ್ಷಕರ ಕಲ್ಯಾಣ ನಿಧಿಯಿಂದ ಅನುದಾನ ಪಡೆದು ಮಕ್ಕಳ ಆರೋಗ್ಯದ ಉಪಚಾರ ಮಾಡಿಸಬಹುದಾಗಿ ಎಂದು ಶಿಕ್ಷಕರಿಗೆ ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕ್ಷೇತ್ರ ಕಾರ್ಯಕರ್ತ ಮಹಮ್ಮದಲಿ ತಹಶೀಲ್ದಾರ ಮಾತನಾಡಿ, ಮಕ್ಕಳ ಅಭಿವೃಧ್ಧಿ ಹಾಗೂ ರಕ್ಷಣೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸತತವಾಗಿ ಕೆಲಸ ನಿರ್ವಹಿಸುತ್ತಾ ಬಂದಿದೆ. ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಹೆಚ್ಚಿನ ಅರಿವು ಅವಶ್ಯಕತೆ ಇದೆ. ಮಕ್ಕಳಿಗೆ ಯಾವುದೇ ಸಮಯದಲ್ಲಿ ತೊಂದರೆಗಳು ಎದುರಾದಲ್ಲಿ ಎಲ್ಲ ಮಕ್ಕಳು ಮಕ್ಕಳ ಸಹಾಯವಾಣಿ 1098 ಅಥವಾ 112ಗೆ ಕರೆಮಾಡಿ ರಕ್ಷಣೆ ಪಡೆಯಬಹುದು. ಎಲ್ಲ ಶಾಲೆಗಳಲ್ಲಿ ಸಲಹಾ ಪೆಟ್ಟಿಗೆಯನ್ನು ಅಳವಡಿಸಿಬೇಕು ಮಕ್ಕಳು ಅದರಲ್ಲಿ ತಮ್ಮ ಸಮಸ್ಯೆಗಳನ್ನು ಬರೆದು ಹಾಕುವಂತಾಗಬೇಕು. ಶಾಲಾ ಆಡಳಿತ ಮಂಡಳಿ ಮಕ್ಕಳ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ತಿಳಿಸಿದರು.
ಯುನಿರ್ವಸಿಟಿ ಪಬ್ಲಿಕ್ ಸ್ಕೂಲ್‍ನ ಮುಖ್ಯೋಪಾದ್ಯಾಯರು ಅನುಸುಯಾ ಬಿ. ನಾಯಕ ಮಾತನಾಡಿ 7 ನೇ ತರಗತಿಯಿಂದ 10 ನೇ ತರಗತಿ ಮಕ್ಕಳಿಗೆ ಪೋಕ್ಸೊ ಕಾಯ್ದೆ ಕುರಿತು ಅರಿವಿನ ಅವಶ್ಯಕತೆ ಇದ್ದು, ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ತುಂಬಾ ಮುಖ್ಯ. 18 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಕ್ಸೊ ಕಾಯ್ದೆಯ ಕುರಿತು ಅರಿವು ತುಂಬಾ ಅವಶ್ಯ, ನಿಮಗೆ ಯಾವುದೇ ತೊಂದರೆಗಳಾದಲ್ಲಿ ತಕ್ಷಣ ನಮ್ಮ ಗಮನಕ್ಕೆ ತರಬೇಕು, ಸೂಕ್ತ ಸಲಹೆಗಳನ್ನು ಪಡೆಯಬೇಕು ಎಂದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಸದರಿ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಆಯೋಜನೆ ಮಾಡಿದ್ದು ತುಂಬಾ ಸಂತೋಷ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸದರಿ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿದ್ದಕ್ಕಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ನನ್ನ ವಂದನೆಗಳು ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಡಾ. ಸಹನಾ, ಸಾಂಸ್ಥಿಕ ರಕ್ಷಣಾಧಿಕಾರಿ ಅಶ್ವಿನಿ ಉಳ್ಳಿಗೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಎಲ್ಲ ಸಿಬ್ಬಂದಿಗಳು, ಶಾಲೆಯ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು. ಡಾ.ಇಂದು ರವಿಕುಮಾರ ನಿರೂಪಿಸಿರು. ಮೀನಾಕ್ಷಿ ಹಿರೇಮಠ ಸ್ವಾಗತಿಸಿದರು. ಗೀತಾ ಬಾಗಲಕೋಟೆ ವಂದಿಸಿದರು.