ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಇರಲಿ – ಡಿವೈಎಸ್‌ಪಿ ಹರೀಶ್.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಆ. 5 :- ಕಾನೂನಿನ ಬಗ್ಗೆ ತಿಳಿಯುವುದರ ಮೂಲಕ ಸಮಾಜಘಾತುಕ ಕೃತ್ಯಗಳಿಗೆ ಕಡಿವಾಣ ಹಾಕಬೇಕಾದ್ದು ವಿದ್ಯಾರ್ಥಿಗಳು ಸೇರಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕೂಡ್ಲಿಗಿ ಡಿವೈಎಸ್‌ಪಿ ಹರೀಶ್ ರೆಡ್ಡಿ ತಿಳಿಸಿದರು.
ತಾಲೂಕಿನ ಕಾನಹೊಸಹಳ್ಳಿ ಕೆ.ಎಂ.ಎಸ್ ಪ್ರಥಮದರ್ಜೆ ಕಾಲೇಜು ಹಾಗೂ ವಿದ್ಯಾನಿಕೇತನ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕಾನೂನು ಮತ್ತು ಸುವ್ಯವಸ್ಥೆ ಕುರಿತ ವಿಚಾರ ಮಾಲಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸುವುದರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಿದೆ. ಪ್ರತಿಯೊಬ್ಬ ಮಗುವು ಶಿಕ್ಷಣದಿಂದ ವಂಚಿತವಾಗಬಾರದು. ಕಾನೂನು ಉಲ್ಲಂಘಿಸಿದರೆ ಶಿಕ್ಷೆಯಾಗಲಿದೆ. ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸುವ ಪಾಲಕರಿಗೆ ಶಿಕ್ಷಣ ಕಲಿತವರು ತಿಳಿ ಹೇಳುವ ಮೂಲಕ ಜಾಗೃತಿ ಮೂಡಿಸಬೇಕು. ಕಾನೂನು, ಕಾಯ್ದೆಗಳು ಪ್ರತಿಯೊಬ್ಬರಿಗೂ ರಕ್ಷಣೆಯ ಆಯುಧಗಳಿದ್ದಂತೆ. ವಿದ್ಯಾರ್ಥಿನಿಯರಿಗೆ ಯಾವುದೇ ತೊಂದರೆಯಾದರೂ ತಮ್ಮ ಪಾಲಕರಿಗೆ ತಿಳಿಸಿ ಹತ್ತಿರ ಪೊಲೀಸ್ ಠಾಣೆಗಳಿಗೆ ತೆರಳಿ ದೂರು ನೀಡಬೇಕು. ಆ ಧೈರ್ಯವನ್ನು ಪ್ರತಿಯೊಬ್ಬರೂ ತೋರಿದಾಗ ಮಾತ್ರ ಅಪರಾಧಗಳನ್ನು ತಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಕೆ.ಎಂ.ಎಸ್. ಪ್ರಥಮದರ್ಜೆ ಕಾಲೇಜಿನ ಸಂಸ್ಥಾಪಕ, ಜಿಪಂ ಮಾಜಿ ಸದಸ್ಯ ಕೆ.ಎಂ.ಶಶಿಧರ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಹೆತ್ತವರ ಆಸೆಗೆ ಅನುಗುಣವಾಗಿ ಉತ್ತಮ ಶಿಕ್ಷಣವಂತರಾಗಿ ಉನ್ನತ ಹುದ್ದೆಗಳನ್ನು ಪಡೆಯುವ ಮೂಲಕ ನೆಮ್ಮದಿಯ ಜೀವನ ನಡೆಸುವಂತಾಗಬೇಕು. ಕಾನೂನಿನ ಬಗ್ಗೆ ಅರಿಯುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕೊಟ್ಟೂರು ಸಿಪಿಐ ಸೋಮಶೇಖರ ಕೆಂಚಾರೆಡ್ಡಿ, ಕಾಲೇಜಿನ ಪ್ರಾಚಾರ್ಯರಾದ ಸುದರ್ಶನ, ನಂದಿನಿ ಮಾತನಾಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ವಿನಯ್, ಎಂ.ಎ.ರಾಮಮೂರ್ತಿ, ಸಿಬ್ಬಂದಿ ಎಚ್.ಕೆ.ಕುಂಟೆ ವಿಜಯ್ ಸೇರಿ ಶಿಕ್ಷಕರು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.