ಕಾನೂನಿನ ಅರಿವಿಂದ ಸೌಹಾರ್ದತೆ ಜೀವನ ಸಾಧ್ಯ

ಕೋಲಾರ,ಡಿ,೮- ಕಾನೂನಿನನ ಅರಿವು ಪ್ರತಿಯೊಬ್ಬರೂ ಪಡೆದು ಅದನ್ನು ಪಾಲಿಸಿ ಮುನ್ನಡೆದರೆ ಸಮಾಜದಲ್ಲಿ ಸೌಹಾರ್ದತೆ ನೆಲಸಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್.ಹೊಸಮನಿ ತಿಳಿಸಿದರು.
ತಾಲ್ಲೂಕಿನ ಕ್ಯಾಲನೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಚನಕಾರರಾದ ಬಸವಣ್ಣನವರ ವಚನದ ರೂಪವನ್ನೇ ಇಂದು ಕಾನೂನಾಗಿ ಕಾಣುತ್ತಿದ್ದೇವೆ ಎಂದ ಅವರು, ಭಾರತದ ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಹಕ್ಕು, ಕರ್ತವ್ಯಗಳನ್ನು ಸಂವಿಧಾನ ನೀಡಿದೆ, ಅದನ್ನು ಸಮಾಜದ ಕಟ್ಟಕಡೆ ವ್ಯಕ್ತಿಗೂ ತಲುಪಿಸುವ ಕೆಲಸ ಕಾನೂನು ಪ್ರಾಧಿಕಾರ ಮಾಡುತ್ತಿದೆ ಎಂದರು.
ಹುಟ್ಟುವ ಮೊದಲು ಭ್ರೂಣವಾಗಿದ್ದಾಗಿನಿಂದ ಸತ್ತ ನಂತರ ಮರಣ ದಿನಾಂಕ ನೋಂದಣಿಗೂ ಕಾನೂನು ಇದೆ, ಕಾನೂನು ಪಾಲಿಸುವವರನ್ನು ಕಾನೂನು ರಕ್ಷಿಸುತ್ತದೆ ಎಂದ ಅವರು, ಪ್ರಾಧಿಕಾರ ಮಹಿಳೆಯರು, ಶೋಷಿತರು, ಮಕ್ಕಳಿಗೆ ಉಚಿತ ಕಾನೂನು ನೆರವು ಒದಗಿಸುವುದರ ಜತೆಗೆ ರಾಜಿ ಸಂಧಾನ, ಕಾನೂನು ಅರಿವು ನೀಡುವ ಕೆಲಸ ಮಾಡುತ್ತಿದೆ ಎಂದರು.
ಬಾಲಕಾರ್ಮಿಕತೆ, ಬಾಲ್ಯವಿವಾಹ ನಿಮ್ಮ ಗಮನಕ್ಕೆ ಬಂದರೆ ೧೦೯೮ ಗೆ ದೂರವಾಣಿ ಕರೆ ಮಾಡಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದ ಅವರು, ಮಾದಕ ವಸ್ತು ವ್ಯಸನಕ್ಕೆ ಒಳಗಾಗದಿರಿ, ಮಾದಕ ವಸ್ತು ಮಾರಾಟ,ವಿತರಣೆ ಗಮನಕ್ಕೆ ಬಂದರೆ ದೂರು ನೀಡಿ ಎಂದರು.
ಮೊಬೈಲ್ ಗೀಳಿಗೆ ಒಳಗಾಗದಿರಿ ಎಂದು ಕಿವಿಮಾತು ಹೇಳಿದ ಅವರು, ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಮಿತಿ ಮೀರುತ್ತಿದ್ದು, ವರ್ಷಕ್ಕೆ ೧ ಲಕ್ಷ ದೂರು ದಾಖಲಾಗುತ್ತಿದೆ ಎಂದು ತಿಳಿಸಿ, ಮೊಬೈಲ್ ಬಳಕೆ ಕುರಿತು ಎಚ್ಚರಿಕೆ ಅಗತ್ಯವಿದೆ, ಮೊಬೈಲ್ ಬಳಸುವಾಗ ಎಚ್ಚರ ಎಂದ ಅವರು, ರಾಷ್ಟ್ರದ್ರೋಹದ ಸಂದೇಶ ಹಾಕುವುದು ಸೇರಿದಂತೆ ತಪ್ಪು ಮಾಡಬಾರದು ಎಂದರು. ಬಾಲ್ಯ ವಿವಾಹ, ಬಾಲ ಕಾರ್ಮಿಕತೆ ಅಪರಾಧವಾಗಿದೆ, ಮಕ್ಕಳನ್ನು ಶಿಕ್ಷಣದಿಂದ ವಂಚಿಸಿ ದುಡಿಮೆಗೆ ಬಳಸುವುದು ತಪ್ಪು ಎಂದ ಅವರು, ಬಾಲ್ಯ ವಿವಾಹದಿಂದಾಗುವ ತೊಂದರೆಗಳ ಕುರಿತು ಮಾಹಿತಿ ನೀಡಿದರು.
ವನ್ಯಪ್ರಾಣಿಗಳ ಸಂರಕ್ಷಣಾ ಕಾಯಿದೆ, ಪೋಕ್ಸೋ ಕಾಯಿದೆ, ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವುದರ ವಿರುದ್ದ ಇರುವ ಕಠಿಣ ಶಿಕ್ಷೆ ಮತ್ತಿತರ ಮಾಹಿತಿಯನ್ನು ಮಕ್ಕಳಿಗೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಓ.ಮಲ್ಲಿಕಾರ್ಜುನ ಮಾತನಾಡಿ, ಶಾಲೆಗಳಲ್ಲಿ ಶಿಸ್ತುಪಾಲನೆ,ಸಮವಸ್ತ್ರ ನಿಗಧಿ ಎಲ್ಲವೂ ಕಾನೂನುಗಳೇ ಆಗಿದೆ, ಸಂಚಾರಿ ನಿಯಮ ಪಾಲಿಸಿ, ಕಾನೂನಿನಡಿ ನಡೆದರೆ ನಿಮ್ಮ ಜೀವನ ಸುಂದರವಾಗಿರುತ್ತದೆ ಇಲ್ಲವಾದಲ್ಲಿ ಅಪರಾಧಿಗಳಾಗಿ ಜೈಲು ಸೇರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಿಕ್ಷಕ ಜಿ.ಎಂ.ಶ್ರೀನಿವಾಸ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಾಮಲಿಂಗಪ್ಪ, ಧನ್ಯಕುಮಾರ್, ರಾಜೇಶ್, ರಾಮಾಂಜಪ್ಪ, ಎಂ.ಆರ್.ನಾಗರಾಜ,ಜ್ಯೋತಿ, ಗೀತಾ, ಭಾಗ್ಯಶ್ರೀ, ಸಂಗೀತಾ ಅಂಗಡಿ, ಸಾಯೇದುನ್ನೀಸಾ, ಧನಲಕ್ಷ್ಮಿ ಮತ್ತು ಸಿಬ್ಬಂದಿ ಹಾಜರಿದ್ದರು.