ಕಾನೂನನ್ನು ಅರಿತು ತಿಳಿಸುವ ಮೂಲಕ ಕಾನೂನು ಸಾಕ್ಷರತೆ ಹೆಚ್ಚಿಸಿ:ಮಲ್ಲೇಶಿ

ಶಹಾಬಾದ:ನ.10: ಕಾನೂನಿನ ಪರಿಣಾಮ ತಿಳಿಯಬೇಕಾದರೆ ಅದರ ಅರಿವು ಮುಖ್ಯ. ಎಲ್ಲರೂ ದಿನನಿತ್ಯದ ಕಾನೂನುಗಳನ್ನು ಅರಿತು, ಇತರರಿಗೂ ತಿಳಿಸುವ ಮೂಲಕ ಕಾನೂನು ಸಾಕ್ಷರತೆ ಹೆಚ್ಚಿಸಬೇಕೆಂದು ನಗರದ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲೇಶಿ ಪರಶುರಾಮ ಮೋಹಿತೆ ಹೇಳಿದರು.

ಅವರು ಬುಧವಾರ ನಗರಸಭೆಯ ಸಭಾಂಗಣದಲ್ಲಿ ತಾಲೂಕಾ ಸೇವಾ ಸಮಿತಿ, ನ್ಯಾಯವಾದಿಗಳ ಸಂಘ,ಕಂದಾಯ, ತಾಪಂ, ನಗರಸಭೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಮಕ್ಕಳ ಮೊಬೈಲ್ ಬಳಕೆ ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತಿದೆ. ಇದರಿಂದ ಅನೇಕ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದು ವಿಷಾಧದ ಸಂಗತಿಯಾಗಿದ್ದು, ಇದಕ್ಕೆ ಕಡಿವಾಣ ಹಾಕದಿದ್ದರೆ ಮಕ್ಕಳು, ಯುವಜನತೆ ಮಾನಸಿಕ, ದೈಹಿಕ ಮತ್ತು ಕಾನೂನಿನ ಸಂಘರ್ಷಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಅಗತ್ಯಕ್ಕೆ ಅನುಗುಣವಾಗಿ ಮಾತ್ರ ಮೊಬೈಲ್ ಬಳಕೆ ಮಾಡಬೇಕು. ಈ ನಿಟ್ಟಿನಲಿ ಅರಿವು ಹೆಚ್ಚಬೇಕು ಎಂದು ಕಿವಿಮಾತು ಹೇಳಿದರು.

ನಗರಸಭೆಯ ಪೌರಾಯುಕ್ತ ಅಶೋಕ ಬಿಲಗುಂದಿ ಮಾತನಾಡಿ, ಪ್ರತಿಯೊಬ್ಬ ನಾಗರಿಕನಿಗೂ ಬದುಕುವ ಹಕ್ಕಿದೆ. ನಮ್ಮೆಲ್ಲರ ಬದುಕು ಸಂತೋಷದಿಂದ ಕಳೆಯಬೇಕಾದರೆ ಕಾನೂನಿ ಪಾಲನೆ ಅಗತ್ಯ. ಒಂದು ವೇಳೆ ಕಾನೂನನ್ನು ಉಲ್ಲಂಘನೆ ಮಾಡಿದರೇ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಳೆದುಕೊಳ್ಳಬೇಕಾಗುತ್ತದೆ.ಆದ್ದರಿಂದ ಕಾನೂನನ್ನು ಪಾಲನೆ ಮಾಡುವುದರ ಜತೆಗೆ ಕಾನೂನಿನ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಹಿರಿಯ ನ್ಯಾಯವಾದಿ ಅತುಲ್ ಯಲಶೆಟ್ಟಿ ಮಾತನಾಡಿ, ಭಾರತದ ಸಂವಿಧಾನದ ಮೂಲಭೂತ ಹಕ್ಕುಗಳ ಕಲಂ -24 ರ ಅಡಿಯಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸಲಾಗಿದೆ.ಇದರ ಹೊರತಾಗಿ, ಸಂವಿಧಾನದಲ್ಲಿ ಸಮಾನತೆ ಮತ್ತು ಸ್ವಾತಂತ್ರ್ಯದೊಂದಿಗೆ ಬದುಕುವ ಹಕ್ಕಿನ ಜೊತೆಗೆ, ಶಿಕ್ಷಣದ ಹಕ್ಕಿದೆ.ಆರರಿಂದ ಹದಿನಾಲ್ಕು ವರ್ಷ ವಯಸ್ಸಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡುತ್ತದೆ. ಬಾಲ ಕಾರ್ಮಿಕ ಸಮಸ್ಯೆಯನ್ನು ಬಗೆಹರಿಸುವ ಕರ್ತವ್ಯ ಮೊದಲು ಆ ಮಗುವಿನ ಪೆÇೀಷಕರ ಮೇಲಿದೆ, ಜೊತೆಗೆ ದೇಶದ ಪ್ರತಿಯೊಬ್ಬ ಪ್ರಜೆಯೂ ಈ ಅಪರಾಧವನ್ನು ನೋಡಿಯೂ ತಪ್ಪಿಸಿಕೊಳ್ಳುತ್ತಾರೆ ಅಥವಾ ಈ ಅಪರಾಧವನ್ನು ತಾವೇ ಮಾಡಿಸುತ್ತಿದ್ದಾರೆ.ಆದ್ದರಿಂದ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಅಪರಾಧ ಎಂದರು. ವಕೀಲರ ಸಂಘದ ತಾಲೂಕಾಧ್ಯಕ್ಷ ಶಶಿಕಾಂತ ಸಿಂಧೆ, ಸಹಾಯಕ ಸರಕಾರಿ ಅಭಿಯೋಜಕ ಸುನೀತಾ.ಎಸ್.ಗಟ್ಟು ವೇದಿಕೆಯ ಮೇಲಿದ್ದರು.ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ,ಉಪಾಧ್ಯಕ್ಷೆ ಸಲೀಮಾಬೇಗಂ,ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ,ಸದಸ್ಯರಾದ ಸಾಬೇರಾಬೇಗಂ, ಎಇಇ ಮುಜಾಮಿಲ್ ಅಲಂ, ವ್ಯವಸ್ಥಾಪಕ ಶರಣಗೌಡ ಪಾಟೀಲ, ರಘುನಾಥ ನರಸಾಳೆ, ಸುನೀಲಕುಮಾರ ವೀರಶೆಟ್ಟಿ, ಮುತ್ತಣ್ಣ ಭಂಡಾರಿ,ಶಿವಕುಮಾರ ಜೆಟ್ಟೂರ,ಶರಣು, ರಾಜೇಶ, ಮಹಿನೋದ್ದಿನ್,ಸಂಘದ ಕಾರ್ಯದರ್ಶಿ ಡಿ.ಸಿ.ಕುಲಕುಂದಿಕರ್, ತಿಮ್ಮಯ್ಯ ಮಾನೆ, ವಕೀಲರಾದ ರಮೇಶ ರಾಠೋಡ, ರಘುವೀರಸಿಂಗ ಠಾಕೂರ, ಸಿ.ಎಸ್.ಪೂಜಾರಿ, ನಾಗೇಶ ಧನ್ನೇಕರ್,ಉಮಾದೇವಿ ಮಲಕೂಡ, ಕು.ಜ್ಯೋತಿ ಚೌಗಲೆ, ರಮೇಶ ಮಲಕೂಡ ಇತರರು ಇದ್ದರು.