
ನಂಜನಗೂಡು: ಮಾ.06:- ಕುಂಬಾರ ಅಭಿವೃದ್ಧಿ ಮಂಡಳಿಯಿಂದ ಕುಂಬಾರಿಕೆ ವೃತ್ತಿಯಲ್ಲಿ ತೊಡಗಿರುವವರಿಷ್ಟೇ ನೆರವು ಸಿಗುತ್ತಲಿದೆ. ಸಮುದಾಯದ ಬಡವರಿಗೂ ಆರ್ಥಿಕವಾಗಿ ನೆರವಾಗುವಂತೆ ಅಭಿವೃದ್ದಿ ನಿಗಮವನ್ನಾಗಿ ಮಾರ್ಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನ ಸೆಳೆಯುವುದಾಗಿ ಶಾಸಕ ಬಿ.ಹರ್ಷವರ್ಧನ್ ಭರವಸೆ ನೀಡಿದರು.
ನಗರದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಮಹಾಕವಿ ತ್ರಿಪದಿ ಸರ್ವಜ್ಞರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಸರ್ಕಾರ ಸಣ್ಣ ಸಣ್ಣ ಸಮುದಾಯಗಳಿಗೂ ಆರ್ಥಿಕವಾಗಿ ಶಕ್ತಿ ನೀಡಿ ಮುನ್ನಲೆಗೆ ತರಬೇಕೆಂಬ ಸದುದ್ದೇಶದಿಂದ ಅನೇಕ ಸಮುದಾಯಗಳಿಗೆ ನಿಗಮ ಮಂಡಳಿಯನ್ನು ಅಸ್ತಿತ್ವಕ್ಕೆ ತಂದಿದೆ. ಅಂತೆಯೇ, ಕುಂಬಾರ ಅಭಿವೃದ್ಧಿ ಮಂಡಳಿ ರಚನೆ ಮಾಡಿ 3 ಕೋಟಿ ಅನುದಾನವನ್ನು ಮೀಸಲಿಟ್ಟಿದೆ. ಕುಂಬಾರಿಕೆ ವೃತ್ತಿಯಲ್ಲಿ ತೊಡಗಿರುವವರೆ ಮಾತ್ರ ಸವಲತ್ತು ನೀಡಲಾಗುತ್ತಿದೆ. ಈ ಸಮುದಾಯದ ಬಡವರಿಗೂ ಅದು ವಿಸ್ತರಣೆಯಾಗಬೇಕೆಂಬ ಕೂಗು ಈ ಸಮುದಾಯದಿಂದ ಕೇಳಿಬರುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕಾನೂನು ತಿದ್ದುಪಡಿ ಮಾಡಿ ಕುಂಬಾರ ಸಮುದಾಯದ ಎಲ್ಲರಿಗೂ ಸವಲತ್ತು ದೊರಕುವಂತೆ ಮಾಡುವುದಾಗಿ ಹೇಳಿದರು.
ಗ್ಯಾರಂಟಿ ಕಾರ್ಡ್ ಟೋಪಿ
ಕಾಂಗ್ರೆಸ್ಸಿನವರು ತಮ್ಮ ಪಕ್ಷದ ಆಸ್ತಿಯನ್ನು ಅಡಮಾನವಿಟ್ಟು ಗ್ಯಾರಂಟಿ ಕಾರ್ಡ್‍ನಲ್ಲಿ ಭರವಸೆಗಳನ್ನು ಈಡೇರಿಸುವುದಾಗಿ ಹೇಳುತ್ತಿಲ್ಲ. ಈಗಾಗಲೇ ಕಾಂಗ್ರೆಸ್ ಸರ್ಕಾರವಿದ್ದಾಗ 2600 ಕೋಟಿ ಸಾಲವನ್ನು ಮಾಡಿ ರಾಜ್ಯದ ಜನರಿಗೆ ಹೊರೆ ಹೊರೆಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹೆಸರಿನಲ್ಲಿ ಜನರಿಗೆ ಟೋಪಿ ಹಾಕುತ್ತಿದೆ ಎಂದು ಶಾಸಕ ಹರ್ಷವರ್ಧನ್ ಲೇವಡಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ನಾಮ್‍ದಾರ್ ನಹೀ, ಕಾಮ್‍ದಾರ್ ಅಂತ ಹೇಳಿದ್ದಾರೆ. ಬರೀ ಮಾತಿನಲ್ಲಿ ಹೇಳಿದರೆ ಸಾಲದು, ಕೆಲಸ ಮಾಡಿತೋರಿಸಬೇಕು ಎಂಬುದಕ್ಕೆ ನಿದರ್ಶನ ಎಂಬಂತೆ ಎಲ್ಲಾ ಸಣ್ಣ ಸಣ್ಣ ಸಮುದಾಯಗಳಿಗೂ ಬಿಜೆಪಿ ಸರ್ಕಾರ ಪ್ರತ್ಯೇಕ ನಿಗಮ ಮಂಡಳಿ ರಚನೆ ಮಾಡಿ ಆರ್ಥಿಕವಾಗಿ ನೆರವಾಗುತ್ತಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಮಾಡಿದ್ದ ಸಾಲದ ಹೊರೆಯನ್ನೇ ತೀರಿಸಲು ಸಾಧ್ಯವಾಗಿಲ್ಲ. ಈಗ ನೀವು ನೀಡುತ್ತಿರುವ ಭರವಸೆಗಳನ್ನು ಸಾಕಾರಗೊಳಿಸಲು ಹೇಗೆ ಸಾಧ್ಯ ಎಂದು ಕಾಂಗ್ರೆಸ್‍ನವರನ್ನು ಜನರು ಪ್ರಶ್ನೆ ಮಾಡಬೇಕು ಎಂದು ಸಲಹೆ ನೀಡಿದರು.
ಭವನ ನಿರ್ಮಾಣ ಪ್ರಸಾದ್ ಕನಸು
ಚುನಾವಣೆ ಹೊಸ್ತಿಲಿನಲ್ಲಿ ಸಮುದಾಯ ಭವನಗಳ ಜಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‍ನವರು ಆರೋಪಿಸಿದ್ದಾರೆ. 13 ಸಮುದಾಯಗಳಿಗೂ ಪ್ರತ್ಯೇಕ ಸಮುದಾಯ ಭವನ ನಿರ್ಮಾಣ ಮಾಡಬೇಕೆಂಬುದು ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಬಹುದಿನಗಳ ಕನಸಾಗಿತ್ತು. ಅದನ್ನು ಸದ್ದಿಲ್ಲದೇ ಸಾಕಾರಗೊಳಿಸುವಲ್ಲಿ ನಾವು ಶ್ರಮ ಹಾಕಿದ ಪರಿಣಾಮವಾಗಿ ಸರ್ಕಾರ 8 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಆಮೂಲಕ ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡುವಲ್ಲಿ ಸಫಲರಾಗಿದ್ದೇವೆ. ಇದನ್ನು ಸಹಿಸದ ಕಾಂಗ್ರೆಸ್ಸಿನವರು ವಿನಾಕಾರಣ ಟೀಕೆ ಮಾಡುತ್ತಿದ್ದಾರೆ ಎಂದು ಹರ್ಷವರ್ಧನ್ ತಿರುಗೇಟು ನೀಡಿದರು.
ಕ್ರೆಡಿಟ್ ಐ ಸಂಸ್ಥೆಯ ಸಂಸ್ಥಾಪಕ ಡಾ.ಪಿ.ವರ್ಷ ಮುಖ್ಯಭಾಷಣ ಮಾಡಿದರು. ಚಿತ್ರದುರ್ಗದ ಕುಂಬಾರ ಗುರುಪೀಠದ ಬಸವಕುಂಬಾರ ಗುಂಡಯ್ಯ ಸ್ವಾಮೀಜಿ ಸಾನಿಧ್ಯವಹಿಸಿದ್ದರು.
ಆಕರ್ಷಕ ಮೆರವಣಿಗೆ
ಮಹಾಕವಿ ತ್ರಿಪದಿ ಸರ್ವಜ್ಞರ ಜಯಂತಿ ಅಂಗವಾಗಿ ತಾಲೂಕು ಕುಲಾಲಗುಂಡ ಬ್ರಹ್ಮರ್ಯ ಕುಂಬಾರರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಕಲಾತಂಡಗಳ ಅಕರ್ಷಕ ಮೆರವಣಿಗೆ ಕಣ್ಮನ ಸೆಳೆಯಿತು.
ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಅಲಂಕೃತ ಸಾರೋಟ್‍ನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸರ್ವಜ್ಞರ ಪ್ರತಿಮೆಗೆ ಚಿತ್ರದುರ್ಗದ ಕುಂಬಾರ ಗುರುಪೀಠದ ಬಸವಕುಂಬಾರ ಗುಂಡಯ್ಯ ಸ್ವಾಮೀಜಿ, ಮಾಜಿ ಶಾಸಕ ಕಳಲೆಕೇಶವಮೂರ್ತಿ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಮೆರವಣಿಗೆ ಚಾಲನೆ ಕೊಟ್ಟರು.
ಮೆರವಣಿಗೆಯಲ್ಲಿ ಮಂಗಳವಾದ್ಯಗೋಷ್ಠಿ, ವೀರಗಾಸೆ, ಕಂಸಾಳೆ, ಡೊಳ್ಳುಕುಣಿತ, ಗಾರುಡಿಗೊಂಬೆ ಸೇರಿದಂತೆ ವಿವಿಧ ಜನಪದ ಕಲಾಪ್ರಕಾರಗಳ ಪ್ರದರ್ಶನ ಮನಸೂರೆಗೊಂಡಿತು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರು ಕುಂಬಾರರು ತಯಾರಿಸಿದ ಮಡಿಕೆಯಲ್ಲಿ ಪೂರ್ಣಕುಂಭ ಕಳಶ ಹೊತ್ತು ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು.
ಮಹಿಳೆಯರು ಹಾಗೂ ಯುವಕರು ಡೊಳ್ಳು ಕುಣಿತದ ಸದ್ದಿಗೆ ಹೆಜ್ಜೆ ಹಾಕುವ ಮೂಲಕ ಕುಣಿದು ಕುಪ್ಪಳಿಸಿದರು. ಮೆರವಣಿಗೆಯಲ್ಲೇ ಕುಂಬಾರಿಕೆಯಿಂದ ಕಲಾತ್ಮಕ ಮಣ್ಣಿನ ಮಡಿಕೆಗಳನ್ನು ಮಾಡುವ ಪ್ರದರ್ಶನ ನೋಡುಗರನ್ನು ಆಕರ್ಷಿಸಿತು. ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿದ ಮೆರವಣಿಗೆ ರಾಷ್ಟ್ರಪತಿ ರಸ್ತೆ ಮಾರ್ಗವಾಗಿ ಸಾಗಿ ಗಿರಿಜಾ ಕಲ್ಯಾಣ ಮಂಟಪದ ಬಳಿ ಅಂತ್ಯಗೊಂಡಿತು.