ಕಾನಾಹೊಸಹಳ್ಳಿ, ಹೊಳಲಿನಲ್ಲಿ ಅಗ್ನಿಶಾಮಕ ಠಾಣೆ


(ಸಂಜೆವಾಣಿ ವಾರ್ತೆ)
ಬೆಂಗಳೂರು, ಜು. 07: ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಗ್ರಾಮದ ಸುತ್ತಲೂ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಪ್ರದೇಶ ಇರುವ ಕಾರಣ ವಿಶೇಷ ಪ್ರಕರಣವೆಂದು ಪರಿಗಣಿಸಿ ಅಗ್ನಿಶಾಸಕ ಠಾಣೆಯನ್ನು ಪ್ರಾರಂಭಿಸಲು ಚಿಂತನೆ ನಡೆಸಲಾಗುತ್ತದೆಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್  ತಿಳಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಸದನದಲ್ಲಿ ನಿನ್ನೆ ಕೇಳಿದ ಪ್ರಶ್ನೆಗೆ ಉತ್ತರಿಸಿದ  ಅವರು, ಸ್ಟ್ಯಾಂಡಿಂಗ್  ಫೈರ್ ಅಡ್ವೈಸರಿ ಕೌನ್ಸಿಲ್  ಮಾನದಂಡಗಳ ಪ್ರಕಾರ ಕಾನಾಹೊಸಹಳ್ಳಿಯಿಂದ 25 ಕಿಲೋ ಮೀಟರ್ ದೂರದಲ್ಲಿರುವ ಜಗಳೂರಿನಲ್ಲಿ ಮತ್ತು 40 ಕಿಲೋ ಮೀಟರ್ ದೂರದಲ್ಲಿರುವ ಕೂಡ್ಲಿಗಿ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ ಅಗ್ನಿಶಾಮಕ ಠಾಣೆಯನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಆದರೆ, ಕಾನಾಹೊಸಹಳ್ಳಿ ಸುತ್ತಲೂ 30 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಇರುವ ಕಾರಣ ವಿಶೇಷ ಪ್ರಕರಣವೆಂದು ಕಾನಾಹೊಸಹಳ್ಳಿಯಲ್ಲಿ ಅಗ್ನಿಶಾಮಕ ಠಾಣೆಯನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುತ್ತದೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲೂ ಮತ್ತು ಬಳ್ಳಾರಿಯ ಕೈಗಾರಿಕಾ ಪ್ರದೇಶದಲ್ಲಿ 60 ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು ಜೀನ್ಸ್ ಅಪಾರಲ್ ಪಾರ್ಕ್ ಕೂಡ ಕಾರ್ಯನಿರ್ವಹಿಸುತ್ತಿದೆ. ಈ ಕೈಗಾರಿಕಾ ಪ್ರದೇಶದಲ್ಲಿ ದೊಡ್ಡಪ್ರಮಾಣದಲ್ಲಿ ಕೈಗಾರಿಕಾ ವೇಸ್ಟ್ ಪ್ರತಿನಿತ್ಯ ಸಿಗುತ್ತಿರುವ ಕಾರಣ ಇಲ್ಲಿಯೂ ತುರ್ತಾಗಿ ಅಗ್ನಿಶಾಮಕ ಠಾಣೆಯ ಅಗತ್ಯವಿದೆ. ನೀವುಗಳು  ಮಾನದಂಡಗಳಲ್ಲಿ ಬದಲಾವಣೆ ತಂದು  ಹೊಳಲು ಮತ್ತು ಬಳ್ಳಾರಿಕಾ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿಶಾಮಕ ಠಾಣೆಯನ್ನು ತುರ್ತಾಗಿ ಪ್ರಾರಂಭಿಸಬೇಕೆಂದು ವೈ.ಎಂ. ಸತೀಶ್ ಅವರು ಗೃಹ ಸಚಿವರಲ್ಲಿ ಮನವಿ ಮಾಡಿದ್ದಾರೆ.