ಕಾನತ್ತಿಲ ಚರಂಡಿ ತಡೆಗೋಡೆ ನಿರ್ಮಾಣ ಯೋಜನೆಗೆ ಚಾಲನೆ

ಸುಳ್ಯ,ಎ.೨- ಸುಳ್ಯ ನಗರ ಪಂಚಾಯಿತಿ ಶಾಸಕರ ಮುಖೇನ ೧೫ ನೇ ಹಣಕಾಸು ನಿಧಿಯಿಂದ ೧೧ ಲಕ್ಷ ಅನುದಾನದಲ್ಲಿ ಸುಳ್ಯ ನಗರದ ಎಸ್.ವಿ.ಯಂ. ಆಸ್ಪತ್ರೆ ಬದಿಯಿಂದ ಹರಿದುಹೋಗುವ ಮುಖ್ಯ ರಾಜಕಾಲುವೆಯಲ್ಲಿ ಮೊದಲ ಹಂತದ ಮಳೆನೀರು ಕಾಲುವೆ ಅಭಿವೃದ್ಧಿ ಕೆಲಸದ ಯೋಜನೆಗೆ ಶುಕ್ರವಾರ ಚಾಲನೆ ನೀಡಲಾಗಿದೆ.
ನಗರ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಗುದ್ದಲಿ ಪೂಜೆ ನೆರವೇರಿಸಿದರು. ವಾರ್ಡ್ ಸದಸ್ಯೆ ಪಂಚಾಯಿತಿ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ಧ ನಾಯ್ಕ್ ರ ಉಪಸ್ಥಿತಿಯಲ್ಲಿ ಸ್ಥಳೀಯ ಕೃಷಿಕ ಬಾಲಚಂದ್ರ ಕಾನತ್ತಿಲ ಯೋಜನೆಗೆ ಚಾಲನೆ ನೀಡಿದರು.
ನ.ಪಂ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮಾತನಾಡಿ ೧೦ ಅಡಿ ಅಗಲ ಮತ್ತು ೭ ಅಡಿ ಎತ್ತರದ ಗೊಡೆಗಳುಳ್ಳ ಕಾಂಕ್ರೀಟ್ ಕಾಲುವೆ ನಿರ್ಮಾಣಗೊಳ್ಳಲಿದೆ. ಸುಳ್ಯದಲ್ಲಿ ವಸತಿ ಸಮುಚ್ಚಯ ಹೆಚ್ಚುತ್ತಿರುವುದರಿಂದ ಮತ್ತು ಮಣ್ಣಿನಲ್ಲಿ ನೀರು ಇಂಗುವ ಗುಣ ಕಡಿಮೆ ಆಗುತ್ತಿರುವುದರಿಂದ ಚರಂಡಿಯಲ್ಲಿ ಹರಿದು ಬರುವ ನೀರಿನ ಪ್ರಮಾಣ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಬೇಸಿಗೆಯಲ್ಲಿ ಆದರೂ ಚರಂಡಿ ನೀರನ್ನು ಶುದ್ಧೀಕರಿಸಿ ಬಿಡುವ ಯೋಜನೆಗೆ ಪ್ರಯತ್ನಿಸುತ್ತಿದ್ದೇವೆ ಎಂದರು.
ನಗರ ಪಂಚಾಯಿತಿ ಇಂಜಿನಿಯರ್ ಶಿವಕುಮಾರ್, ಸದಸ್ಯರಾದ ಬಾಲಕೃಷ್ಣ ಭಟ್ ಕೊಡೆಂಕಿರಿ, ಸುಧಾಕರ್, ಶೀಲಾವತಿ ಕುರುಂಜಿ, ಕಿಶೋರಿ ಶೇಟ್, ಧೀರಾ ಕ್ರಾಸ್ತಾ, ಬಿ.ಜೆ.ಪಿ ನಗರ ಅಧ್ಯಕ್ಷ ಐ.ಬಿ ಚಂದ್ರಶೇಖರ್, ನಗರ ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ, ತೀರ್ಥಕುಮರ್ ಕುಡೆಕಲ್ಲು, ದಾಮೋದರ ಕಾನತ್ತಿಲ, ಕುಲದೀಪ್ ಪೆಲ್ತಡ್ಕ ಹಾಗೂ ಕಂಟ್ರಾಕ್ಟರ್ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.