ಕಾಂಗ್ರೆಸ್- ಜೆಡಿಎಸ್‌ನಿಂದ ಕಾದು ನೋಡುವ ತಂತ್ರ

ಬೆಂಗಳೂರು, ಏ. ೧೦- ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ೩ನೇ ಪಟ್ಟಿ ಬಿಡುಗಡೆಗೆ ಹಾಗೂ ಜೆಡಿಎಸ್ ೨ನೇ ಪಟ್ಟಿ ಬಿಡುಗಡೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವುದನ್ನೇ ಕಾಯುತ್ತಿದ್ದು, ಬಿಜೆಪಿಯ ಮೊದಲನೇ ಪಟ್ಟಿ ಬಿಡುಗಡೆಯಾದ ನಂತರ ಕಾಂಗ್ರೆಸ್ ೩ನೇ ಪಟ್ಟಿ ಹಾಗೂ ಜೆಡಿಎಸ್ ೨ನೇ ಪಟ್ಟಿ ಬಿಡುಗಡೆ ಮಾಡಲಿವೆ.ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ೧೨೪ ಅಭ್ಯರ್ಥಿಗಳ ಮೊದಲ ಪಟ್ಟಿ ಹಾಗೂ ೪೨ ಅಭ್ಯರ್ಥಿಗಳ ೨ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜೆಡಿಎಸ್ ೯೩ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಎರಡು ಪಕ್ಷಗಳು ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಲು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯನ್ನು ಕಾಯುತ್ತಿವೆ.ಬಿಜೆಪಿಯಲ್ಲಿ ಟಿಕೆಟ್ ಸಿಗದ ಆಕಾಂಕ್ಷಿಗಳನ್ನು ತಮ್ಮ ಪಕ್ಷದತ್ತ ಸೆಳೆಯಲು ಈ ಎರಡು ಪಕ್ಷಗಳು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿವೆ.ಬಿಜೆಪಿಯಲ್ಲಿ ಕೆಲ ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಸುಳಿವಿನ ಹಿನ್ನೆಲೆಯಲ್ಲಿ ಈ ಶಾಸಕರುಗಳನ್ನು ಸೆಳೆದು ಟಿಕೆಟ್ ನೀಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮುಂದಾಗಿವೆ. ಹಾಗಾಗಿ ಈ ಎರಡು ಪಕ್ಷಗಳ ಪಟ್ಟಿ ಬಿಡುಗಡೆ ತಡವಾಗಿದೆ.
ದೆಹಲಿಯಲ್ಲಿ ಸಭೆ
ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಆಯ್ಕೆ ಸಂಬಂಧ ೩ನೇ ಪಟ್ಟಿಗೆ ಅಂತಿಮರೂಪ ನೀಡಲು ಇಂದು ಸಂಜೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ನಡೆಯಲಿದೆ.ಈ ಸಭೆಯಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ದೆಹಲಿಗೆ ತೆರಳಿದ್ದಾರೆ.ಇಂದು ಸಂಜೆ ಬಿಜೆಪಿ ಪಟ್ಟಿ ಬಿಡುಗಡೆಯಾದ ನಂತರ ಕಾಂಗ್ರೆಸ್ ಪಕ್ಷ ಸಹ ೩ನೇ ಪಟ್ಟಿಯನ್ನು ಅಂತಿಮಗೊಳಿಸಿ ಏ. ೧೩ರ ನಂತರ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.
ಇನ್ನೆರಡು ದಿನಗಳಲ್ಲಿ ಜೆಡಿಎಸ್ ಪಟ್ಟಿ
ಜೆಡಿಎಸ್ ಸಹ ವಿಧಾನಸಭಾ ಚುನಾವಣೆಗೆ ೨ನೇ ಪಟ್ಟಿಯನ್ನು ಸಿದ್ದಗೊಳಿಸಿದ್ದು, ಇನ್ನೆರಡು ಮೂರು ದಿನಗಳಲ್ಲಿ ೨ನೇ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.
ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಸಿಗದ ಕೆಲವರು ಜೆಡಿಎಸ್ ಬಾಗಿಲು ತಟ್ಟಿದ್ದು, ಅಂತಹವರಿಗೆ ಜೆಡಿಎಸ್ ಟಿಕೆಟ್ ನೀಡುವ ಸಾಧ್ಯತೆಗಳಿವೆ.
ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಗೊಂದಲವನ್ನು ಪರಿಹರಿಸಿಕೊಂಡು ಜೆಡಿಎಸ್ ೨ನೇ ಪಟ್ಟಿ ಬಿಡುಗಡೆ ಮಾಡಲಿದೆ ಎಂದು ಆ ಪಕ್ಷದ ಮೂಲಗಳು ಹೇಳಿವೆ.