ಕಾದು ಕೆಂಡವಾದ ಕಲಬುರಗಿ

ಕಲಬುರಗಿ,ಏ.5-ಹವಾಮಾನ ಇಲಾಖೆ ವರದಿ ಅನುಸಾರ ಕಲಬುರಗಿಯಲ್ಲಿ ಗುರುವಾರ 42.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಆ ಮೂಲಕ ಕಲಬುರಗಿ ಕಾದ ಕೆಂಡವಾದಂತಾಗಿದೆ. ಬೆಳಿಗ್ಗೆ 10 ಗಂಟೆಯಾಗುತ್ತಿದ್ದಂತೆಯೇ ಏರುವ ಬಿಸಿಲಿನ ತಾಪ ಮಧ್ಯಾಹ್ನ 12 ಗಂಟೆಯ ವೇಳೆಗೆ ಪ್ರಖರವಾಗಿ ಜನ ಹೊರಗಡೆ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ.
ಬಿಸಿಲಿನ ತೀವ್ರ ಪ್ರಖರತೆಯಿಂದಾಗಿ ಹಗಲಿನಲ್ಲಿ ಭೂಮಿ ಕಾದ ಕೆಂಡವಾಗುತ್ತಿದ್ದು, ರಾತ್ರಿ ಬಿಸಿಗಾಳಿ ಬೀಸುತ್ತಿರುವುದರಿಂದ ಜನ ಚಡಪಡಿಸುವಂತಾಗಿದೆ. ಫ್ಯಾನ್, ಕೂಲರ್ ಬಳಸಿದರೂ ತಂಪು ಗಾಳಿ ಬೀಸದೆ ಬಿಸಿಗಾಳಿ ಬರುತ್ತಿರುವುದರಿಂದ ಮಕ್ಕಳು ಮತ್ತು ವೃದ್ಧರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಬಿಸಿಲು ಮತ್ತು ಧಗೆಯ ಕಾರಣಕ್ಕೆ ಜನ ಮನೆಯೊಳಗೂ ಕೂರಲಾಗದಂತಹ ಸ್ಥಿತಿ ನಿರ್ಮಾಣವಾಗಿದ್ದು, ಮನೆ ಮುಂದೆ ಮರ ಇದ್ದವರು ಮರದ ಕೆಳಗೆ ಕುಳಿತು ದಿನ ಕಳೆಯುತ್ತಿದ್ದಾರೆ. ರಾತ್ರಿ ಬಿಸಿಗಾಳಿಯಿಂದಾಗಿ ಜನ ನಿದ್ರೆ ಮಾಡದೆ ಒದ್ದಾಡುವಂತಾಗಿದೆ.
ಮಧ್ಯಾಹ್ನದ ವೇಳೆ ಕೆಲಸ ಕಾರ್ಯಗಳಿಗಾಗಿ ಮನೆಯಿಂದ ಹೊರ ಬಂದಾಗ ಬಿಸಿಲಿನಿಂದ ರಕ್ಷಣೆ ಪಡೆಯಲು ಜನ ಕ್ಯಾಪ್ ಮತ್ತು ಕೊಡೆ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಬಾಯಾರಿಕೆ ನೀಗಿಸಿಕೊಳ್ಳಲು ತಂಪು ಪಾನಿಯಗಳಿಗೆ ಮೊರೆ ಹೋಗುತ್ತಿದ್ದಾರೆ. ಬಿಸಿಲು ಹೆಚ್ಚಾದ ಕಾರಣ ಬಡವರ ಫ್ರಿಜ್ ಎಂದೇ ಕರೆಯಲಾಗುವ ಮಣ್ಣಿನ ಮಡಿಕೆಗಳಿಗೂ ಹೆಚ್ಚಿನ ಬೇಡಿಕೆ ಬಂದಂತಾಗಿದೆ. ನಗರದ ಶರಣಬಸವೇಶ್ವರ ದೇವಸ್ಥಾನ ರಸ್ತೆ ಸೇರಿದಂತೆ ಮತ್ತಿತರ ಕಡೆ ಮಣ್ಣಿನ ಮಡಕೆಗಳ ಮಾರಾಟ ಜೋರಾಗಿ ನಡೆದಿದೆ.
ಸಂಜೆ 6 ಗಂಟೆಯಷ್ಟೊತ್ತಿಗೆ ಬಿಸಿಲಿನ ತಾಪ ಕಡಿಯಾಗುತ್ತಿದ್ದರೂ ಬಿಸಿಗಾಳಿ ಬೀಸುತ್ತಿರುವುದರಿಂದ ಜನ ಹೈರಾಣಾಗಿ ಹೋಗುತ್ತಿದ್ದಾರೆ. ಗಿಡಮರಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಮತ್ತು ಮಳೆಯ ಕೊರತೆಯೇ ಇಷ್ಟೊಂದು ಬಿಸಿಲು ಹೆಚ್ಚಾಗಲು ಕಾರಣ ಎಂದು ಜನ ಅಲವತ್ತುಕೊಳ್ಳುವಂತಾಗಿದೆ.