ಕಾಣೆಯಾದ ಮಸರಕಲ್ ಗ್ರಾ.ಪಂ ಪಿಡಿಒ ಫಯಾಜ್‌ಅಲಿ

ದೇವದುರ್ಗ,ಮಾ.೦೪- ತಾಲೂಕಿನ ಮಸಕರಲ್ ಗ್ರಾಮದಲ್ಲಿ ಹಲವು ಸಮಸ್ಯೆಗಳಿದ್ದು ಕೇಳಲು ಪಿಡಿಒ ಸೇರಿ ಯಾವುದೇ ಅಧಿಕಾರಿಗಳು ಕೈಗೆಸಿಗುತ್ತಿಲ್ಲ. ಆಡಳಿತ ಮಂಡಳಿ ಇದ್ದೂ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಶುಕ್ರವಾರ ಗ್ರಾಪಂಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ಮಸರಕಲ್ ಅತ್ಯಂದ ದೊಡ್ಡ ಗ್ರಾಮವಾಗಿದ್ದು ವಿವಿಧ ಹಳ್ಳಿಗಳು ಗ್ರಾಪಂ ವ್ಯಾಪ್ತಿಗೆ ಬರುತ್ತಿಲ್ಲ. ಗ್ರಾಮದಲ್ಲಿ ಹಲವು ದಿನಗಳಿಂದ ಕುಡಿವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಈ ಬಗ್ಗೆ ಕೇಳಬೇಕೆಂದರೆ ಎರಡು ತಿಂಗಳಿನಿಂದ ಪಿಡಿಒ ಗ್ರಾಪಂಗೆ ಭೇಟಿಯೇ ನೀಡಿಲ್ಲ. ಆಡಳಿತ ಮಂಡಳಿ ಸಮಸ್ಯೆ ಕೇಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಪಿಡಿಒ ಇಲ್ಲದೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜನರ ಸಮಸ್ಯೆ ಕೇಳುತ್ತಿಲ್ಲ. ಬೇಸಿಗೆ ಹಿನ್ನೆಲೆ ಬಹುತೇಕ ವಾರ್ಡ್‌ಗಳಲ್ಲಿ ಕುಡಿವ ನೀರಿನ ತೀವ್ರ ಸಮಸ್ಯೆಯಿದೆ.
ಗ್ರಾ.ಪಂ ವ್ಯಾಪ್ತಿಯಲ್ಲಿ ನಾಲ್ಕು ಬೋರ್‌ವೆಲ್ ಇದ್ದರೂ ನೀರಘಂಟಿ ಇಲ್ಲದೆ ಸಮರ್ಪಕವಾಗಿ ನೀರು ಬಿಡುತ್ತಿಲ್ಲ. ಡಿಸೆಲ್ ಇಲ್ಲ ಎನ್ನುವ ನೆಪ ಹೇಳಿ ಕಸದ ವಾಹನ ಮೂಲೆಯಲ್ಲಿ ನಿಲ್ಲಿಸಿದ್ದು, ಕಸ ಎಲ್ಲೆಂದರಲ್ಲಿ ರಾಶಿರಾಶಿ ಬಿದ್ದಿದೆ. ಚರಂಡಿಗಳು ಕಸದಿಂದ ತುಂಬಿತುಳುಕುತ್ತಿದ್ದು, ಸೊಳ್ಳಿಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುತ್ತಿವೆ. ಈ ಬಗ್ಗೆ ಪಿಡಿಒ, ತಾಪಂ ಇಒಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಎಲ್ಲ ವಾರ್ಡ್ ಹಾಗೂ ಗ್ರಾಮಗಳಿಗೆ ಸಮರ್ಪಕವಾಗಿ ಕುಡಿವ ನೀರು ಪೂರೈಕೆ ಮಾಡಬೇಕು. ಸಮರ್ಪಕವಾಗಿ ಕಸ ವಿಲೇವಾರಿ ಮಾಡಬೇಕು. ಗ್ರಾಪಂಗೆ ಪಿಡಿಒ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿನೀಡಿ ಜನರ ಸಮಸ್ಯೆ ಆಲಿಸಬೇಕು. ಅಲ್ಲಿಯವರೆಗೆ ಬೀಗ ತೆಗೆಯಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕಚೇರಿಗೆ ಬೀಗಹಾಕಿ ಕೀಯನ್ನು ತಾಪಂ ಎಡಿ ಬಸಣ್ಣ ನಾಯಕಗೆ ಕೊಟ್ಟರು.
ಗ್ರಾಪಂ ಸದಸ್ಯರಾದ ಬಸವರಾಜ ಗಚ್ಚಿನಬಾವಿ, ಹನುಮಂತ ರಘುರತ್ನ, ಮಲ್ಲೇಶ ಚಿಕ್ಕಹೊನ್ನಕುಣಿ, ಹನುಮಂತ್ರಾಯ ಮಿಯ್ಯಾಪುರ, ಗಂಗಪ್ಪ ಪೂಜಾರಿ, ಕೆ.ಸಿದ್ದಾಮರಡ್ಡಿ, ಮಹಿಬೂಬ್ ಮಸರಕಲ್, ಬಸವರಾಜ ಗುಂಟ್ರಾಳ ಇತರರಿದ್ದರು.