
ಸಂಜೆವಾಣಿ ವಾರ್ತೆ
ದಾವಣಗೆರೆ. ಆ.೧೬;ಕಾಣೆಯಾಗಿದ್ದಾಳೆ ಹುಡುಕಿಕೊಟ್ಟವರಿಗೆ ಬಹುಮಾನ ಚಿತ್ರ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಲಿದ್ದು ಈ ಪ್ರಯುಕ್ತ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು.ಉಪಮೇಯರ್ ಯಶೋಧ ಯಗ್ಗಪ್ಪ ಪೋಸ್ಟರ್ ಬಿಡುಗಡೆ ಮಾಡಿದರು.ಈ ವೇಳೆ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ರಾಜ್ ಕಾರ್ತಿಕ್ ಮಾತನಾಡಿ ಸಾಮಾಜಿಕ ಜಾಲತಾಣಗಳ ಬಳಕೆ ಅದರಲ್ಲೂ ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವಲ್ಲಿ ಹೇಗೆ ಜಾಗರೂಕರಾಗಿರಬೇಕು ಎಂಬ ಸಂದೇಶ ಚಿತ್ರದಲ್ಲಿ ತೋರಿಸಲಾಗಿದೆ.ನಾಯಕಿ ಗ್ರಾಮೀಣಭಾಗದಿಂದ ಬೆಂಗಳೂರಿಗೆ ಬಂದ ವೇಳೆ ನಡೆಯುವ ಘಟನೆಗಳ ಕಥೆಯನ್ನು ಕಾಣೆಯಾಗಿದ್ದಾಳೆ ಚಿತ್ರ ಒಳಗೊಂಡಿದೆ. ಸಾಮಾಜಿಕ ಜಾಗೃತಿ ಮೂಡಿಸುವ ವಿಷಯ ಚಿತ್ರದಲ್ಲಿದೆ. ಮಂಡ್ಯ,ಬೆಂಗಳೂರು, ಮೇಲುಕೋಟೆ, ಮೈಸೂರು ಈ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ.ಚಿತ್ರದಲ್ಲಿ ಎರಡು ಹಾಡುಗಳಿದ್ದು.ಮಂಡ್ಯ ನೆಲದ ಸೊಗಡು ಅನಾವರಣಗೊಳಿಸಲಾಗಿದೆ ಎಂದರು.ನಾಯಕಿಯಾಗಿ ಕೀರ್ತಿಭಟ್ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಹಿರಿಯ ಕಲಾವಿದರಾದ ಗಿರಿಜಾ ಲೋಕೇಶ್,ವಿನಯಪ್ರಸಾದ್,ಬಿರಾದರ್,ಜಯರಾಂ ಮತ್ತಿತರರಿದ್ದಾರೆ.ಸಿ.ನಾಗರಾಜು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಎಲ್.ವಿ ಕೌಶಿಕ್ ಸಂಗೀತ ನೀಡಿದ್ದಾರೆ ಎಂದರು.ನಾಯಕ ವಿನಯ್ ಕಾರ್ತಿಕ್ ಮಾತನಾಡಿ ಪ್ರಥಮಬಾರಿಗೆ ನಾಯಕನಾಗಿ ಅಭಿನಯಿಸಿದ್ದೇನೆ.ಮೊದಲ ಚಿತ್ರದಲ್ಲೇ ಹಿರಿಯ ನಟರೊಂದಿಗೆ ಅಭಿನಯಿಸಿರುವುದು ಸಂತೋಷ ತಂದಿದೆ.ಯೂಟೂಬ್ ನಲ್ಲಿ ಚಿತ್ರದ ಹಾಡುಗಳು ಹಾಗೂ ಪ್ರೋಮೋ ಬಿಡುಗಡೆ ಮಾಡಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ಯಶೋಧ ಹೆಗ್ಗಪ್ಪ, ಸಂತೋಷ್ ಕೆ ಬೆಂಗೇರಿ ಉಪಸ್ಥಿತರಿದ್ದರು.