ಕಾಡು ಪ್ರಾಣಿಗಳ ಬೇಟೆಗೆ ಸಂಚು ಐವರು ಸೆರೆ

ಚಾಮರಾಜನಗರ,ಜು.೨೮-ಅರಕಲವಾಡಿ ಸಮೀಪ ಪ್ರವಾಸಿಗರ ಸೋಗಿನಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಹೊಂಚು ಹಾಕುತ್ತಿದ್ದ ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಕೊಡಗು ಮೂಲದ ಕಿಶನ್ ಕುಮಾರ್, ಧನಂಜಯ್, ಆಸಿಕ್, ಬಡಗಲಪುರ ಗ್ರಾಮದ ಗೋವಿಂದರಾಜು ಹಾಗೂ ಬೆಂಗಳೂರಿನ ಪ್ರಮೋದ್ ಬಂಧಿತ ಆರೋಪಿಗಳಾಗಿದ್ದಾರೆ.
ಪ್ರವಾಸಿಗರ ಸೋಗಿನಲ್ಲಿ ಬಂದಿದ್ದ ಆರೋಪಿಗಳು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಅರಣ್ಯ ಇಲಾಖೆಯ ಗಸ್ತಿನ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದಾರೆ.
ಬಂಧಿತರಿಂದ ೨ ಗನ್, ೬ ಜೀವಂತ ಗುಂಡು, ಚೂರಿ, ಕತ್ತಿ, ತಲೆಬ್ಯಾಟರಿ ವಶಪಡಿಸಿಕೊಳ್ಳಲಾಗಿದೆ.
ಕಾಡು ಪ್ರಾಣಿ ಬೇಟೆ:
ಅಕ್ರಮವಾಗಿ ಬಂದೂಕು ಪಡೆದು ಕಾಡು ಪ್ರಾಣಿ ಬೇಟೆಯಾಡಲು ಮುಂದಾಗಿದ್ದ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯ ಮಹದೇಶ್ವರ (೫೫) ದೊಡ್ಡಿಂದುವಾಡಿಯ ಮಹದೇವ ಅಲಿಯಾಸ್ ಗೊದ್ದಮಣಿ (೫೦) ಬಂಧಿತ ಆರೋಪಿಗಳಾಗಿದ್ದಾರೆ.ಇವರು ಕೆಲ ದಿನಗಳಿಂದ ಕಾಡಿನೊಳಗೆ ನುಸುಳಿ ಪ್ರಾಣಿಗಳ ಬೇಟೆಯಾಡಲು ಸಂಚು ರೂಪಿಸಿದ್ದರು.
ಅದರಂತೆ ಜು.೨೭ ರ ಬೆಳಗ್ಗೆ ಗುಂಡಾಲ್ ಜಲಾಶಯ ಸಮೀಪದ ಸೊಳ್ಳೆ ಕಟ್ಟೆಕೆರೆ ಅರಣ್ಯ ಪ್ರದೇಶಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಂದೂಕು ಹೊತ್ತೊಯ್ಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಕ್ರೈಂ ಪಿಎಸ್‌ಐ ತಂಡ ದಾಳಿ ನಡೆಸಿದ್ದು, ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ದಾಳಿಯಲ್ಲಿ ೧ ನಾಡ ಬಂದೂಕು ಹಾಗೂ ಇನ್ನಿತರ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.