
ಚಿತ್ರದುರ್ಗ, ಮಾ.9: ರಾಜ್ಯ ಕಾಂಗ್ರೇಸ್ ಪಕ್ಷಕ್ಕೆ ಬಲವಾಗಿ ನಿಂತಿರುವ ಕಾಡುಗೊಲ್ಲರಿಗೆ ಬರುವ ಚುನಾವಣೆಯಲ್ಲಿ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ಟಿಕೇಟ್ ನೀಡಬೇಕು ಎಂದು ಮಾಜಿ ಶಾಸಕ ಎ.ವಿ.ಉಮಾಪತಿ ಕಾಂಗ್ರೇಸ್ ಹೈ ಕಮಾಂಡ್ ಗೆ ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿರಾ ಗಾಂಧಿ ಕಾಲದಿಂದಲೂ ಕಾಡುಗೊಲ್ಲರು ಕಾಂಗ್ರೇಸ್ ಪಕ್ಷಕ್ಕೆ ಸಂಪ್ರಾದಯ ಬದ್ದ ಮತದಾರರಾಗಿದ್ದಾರೆ. ಇಂತಹ ಸಮಾಜವನ್ನು ಇಂದು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಕಳೆದ ಭಾರೀ ಚುನಾವಣೆಯಲ್ಲಿ ಕಾಡು ಗೊಲ್ಲರನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಫಲಿತಾಂಶ ವ್ಯತಿರಿಕ್ತ ಆಗಿದ್ದನ್ನು ಪಕ್ಷದ ಮುಖಂಡರು ಗಮನಿಸಿದ್ದಾರೆ. ಆದ್ದರಿಂದ ಈ ಭಾರೀ ಚುನಾವಣೆಯಲ್ಲಿ ಕಾಡುಗೊಲ್ಲರನ್ನು ನಿರ್ಲಕ್ಷ್ಯ ಮಾಡುವುದಿಲ್ಲ ಎಂಬ ನಂಬಿಕೆ ಇದೆ ಎಂದರು.ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಡುಗೊಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಈ ಭಾಗದಲ್ಲಿ ನಮಗೆ ಟಿಕೇಟ್ ನೀಡಬೇಕು. ಇದರಿಂದ ಪಕ್ಷಕ್ಕೆ ಆನೆ ಬಲ ಬರಲಿದೆ. ಅಲ್ಲದೆ ಇತರೆ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಅನುಕೂಲ ಆಗಲಿದೆ ಎಂದರು.ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬುದು ನಮ್ಮ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಎಲ್ಲಾ ಜಾತಿಗಳಿಗೂ ಮಾನ್ಯತೆ ನೀಡಬೇಕು. ನಾವುಗಳು ಪ್ರಚಾರಕ್ಕೆ ಹೋದಂತಹ ಸಂದರ್ಭದಲ್ಲಿ ನಮ್ಮನ್ನು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಕಾಂಗ್ರೇಸ್ ಕಾಡುಗೊಲ್ಲರನ್ನು ಗುರುತಿಸುತ್ತಿಲ್ಲ. ಏಕೆ ಆ ಪಕ್ಷದಲ್ಲಿ ಇದ್ದಿರಿ ಎಂದು. ಆದ್ದರಿಂದ ಪಕ್ಷ ಕಾಡುಗೊಲ್ಲರನ್ನು ಗುರುತಿಸಿ ಟಿಕೇಟ್ ನೀಡಬೇಕು ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೇಸ್ ಮುಖಂಡರಾದ ಮೋಸಿನ್ ಪಾಟೇಲ್, ಕಿರಣ್ ಕುಮಾರ್, ಶಿವಣ್ಣ, ಪಾಂಡುರಂಗಪ್ಪ ಹಾಜರಿದ್ದರು.