ಕಾಡುಗೊಲ್ಲರ ಅಭಿವೃದ್ಧಿ ನಿಗಮಕ್ಕೆ ಚಂಗಾರ ಮಾರಣ್ಣ ಅಧ್ಯಕ್ಷ

ಸಿರಾ, ಜು. ೩೦- ಚಂಗಾವರ ಮಾರಣ್ಣನವರನ್ನು ರಾಜ್ಯ ಕಾಡುಗೊಲ್ಲರ ಅಭಿವೃದ್ದಿ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿಸಿ ಯಾದವ ಸಮುದಾಯಕ್ಕೆ ಗಿಫ್ಟ್ ನೀಡುವ ಮೂಲಕ ಶಾಸಕ ರಾಜೇಶ್ ಗೌಡ ಮಾಜಿ ಸಚಿವರಿಗೆ ಟಾಂಗ್ ಕೊಟ್ಟಿದ್ದಾರೆ.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ತಾಲ್ಲೂಕಿನಾದ್ಯಂತ ಬಿಡುವೆನ್ನದೆ ಸಂಚರಿಸುತ್ತಿರುವ ಶಾಸಕರು ತಮ್ಮ ಕಡಿಮೆ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಾಗಳನ್ನು ಕೈಗೊಂಡಿದ್ದು, ತಾಲ್ಲೂಕಿನಲ್ಲಿ ಬಿಜೆಪಿ ಭದ್ರಕೋಟೆ ಸ್ಥಾಪಿಸುವ ಉತ್ಸುಕದಲ್ಲಿದ್ದಾರೆ.
ಇದರ ಜತೆಗೆ ರಾಜ್ಯ ಸರ್ಕಾರದಿಂದ ಐತಿಹಾಸಿಕ ಜುಂಜಪ್ಪನಗುಡ್ಡೆ ಅಭಿವೃದ್ಧಿಗೆ ಒಂದು ಕೋಟಿ ಘೋಷಣೆ ಮಾಡಿಸಿ, ಮುಂದಿನ ಚುನಾವಣೆಯಲ್ಲಿ ನಿರ್ಣಾಯಕರೆನಿಸಿಕೊಂಡಿರುವ ಯಾದವ ಸಮುದಾಯಕ್ಕೆ ವಿಶೇಷ ಸ್ಥಾನಮಾನ ದೊರೆಕಿಸಿ ಕೊಟ್ಟಿದ್ದಾರೆ. ಈ ಹಿಂದೆ ಮಾಜಿ ಕಾನೂನು ಸಚಿವರು ಅದೇ ಸಮುದಾಯವನ್ನು ಕಡೆಗಣಿಸಿದ ಪರಿಣಾಮ ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಸೋಲಿನ ರುಚಿ ಕಾಣುವಂತಾಗಿದ್ದು, ಎಚ್ಚೆತ್ತುಕೊಂಡ ಶಾಸಕರು ಪಕ್ಷದ ಸಂಘಟನೆಯ ಜತೆಗೆ ಅಭಿವೃದ್ದಿಯನ್ನು ಸಹ ಜತೆ ಜತೆಯಲ್ಲಿ ಮಾಡಿರುವುದು ನಿಜಕ್ಕೂ ಶ್ಲಾಘನೀಯವೆನಿಸಿದೆ.
ಈ ಸಂಬಂದ ಮಾತನಾಡಿದ ಚಂಗಾವರ ಮಾರಣ್ಣ, ಸ್ವಾತಂತ್ರ್ಯ ಬಂದಾಗಿನಿಂದ ಇದೂವರೆಗೆ ಯಾವುದೇ ರಾಜಕೀಯ ಪಕ್ಷಗಳು ರಾಜ್ಯದಲ್ಲಿ ಕಾಡುಗೊಲ್ಲರು ಇದ್ದಾರೆ ಎಂಬುದನ್ನು ಗುರುತಿಸುವಂತಹ ಕೆಲಸವನ್ನು ಮಾಡಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ಇಂದು ನಮ್ಮನ್ನು ಗುರುತಿಸಿ, ಇಂದು ರಾಜಕೀಯ ಸ್ಥಾನಮಾನ ಕಲ್ಪಿಸುವ ಮೂಲಕ ರಾಜ್ಯದಲ್ಲಿ ಯಾದವ ಸಮುದಾಯದ ಏಳ್ಗೆಗಾಗಿ ಜನಪರ ಯೋಜನೆಗಳನ್ನು ಕಲ್ಪಿಸುವ ಕಾಯಕದಲ್ಲಿ ತೊಡಗಿದೆ ಎಂದರು.
ಕಾಡುಗೊಲ್ಲ ಸಮುದಾಯ ಎಂಬುದು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸೇರಿದಂತೆ ಎಲ್ಲಾ ರೀತಿಯಲ್ಲಿ ಹಿಂದುಳಿದಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯಲ್ಲಿ ಅಭಿವೃದ್ದಿ ಹೊಂದಲಿದೆ. ಈ ಸಮಯದಲ್ಲಿ ಯಾದವ ಸಮುದಾಯವನ್ನು ಗುರುತಿಸಿ, ಗೌರವಿಸಿ ವಿಶೇಷ ಸ್ಥಾನ ದೊರಕಿಸಿಕೊಟ್ಟ ಶಾಸಕ ರಾಜೇಶ್‌ಗೌಡ ರವರ ಶ್ರಮ ಅವಿಸ್ಮರಣೀಯ. ನಮ್ಮ ಸಮುದಾಯಕ್ಕೆ ನೀಡಿರುವ ಬಹುದೊಡ್ಡ ಕೊಡುಗೆ ಎಂದು ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಖಾನ್ ಹಾವಳಿ
ದಶಕಗಳ ಸಿರಾ ತಾಲ್ಲೂಕನ್ನು ಆಳಿದ ಮಾಜಿ ಕಾನೂನು ಸಚಿವರ ಕಾಲದಲ್ಲಿ ಅದೆಷ್ಟೋ ಮಂದಿ ನಿಷ್ಟಾವಂತ ಕಾರ್ಯಕರ್ತರು ದಿನೇ ದಿನೇ ಪಕ್ಷದಿಂದ ದೂರ ಸರಿಯುತ್ತಿದ್ದು, ಸಿರಾದಲ್ಲಿ ಖಾನ್ ಹಾವಳಿಯಿಂದ ಕಾಂಗ್ರೆಸ್ ಅಲ್ಪಸಂಖ್ಯಾತರ ಪಕ್ಷವಾಗಿ ಬಿಟ್ಟಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಈ ಹಿಂದೆ ಮಾಜಿ ಬ್ಲಾಕ್ ಕಾಂಗೈ ಅಧ್ಯಕ್ಷ ಅಲ್ಲಾ ಭಕಾಶ್ ಕೆ ಪ್ಯಾರೂ ಅಧಿಕಾರದಲ್ಲಿದ್ದಾಗ ಪಕ್ಷ ಸಂಘಟನೆ ಕ್ರಿಯಾಶೀಲವಾಗಿದ್ದು, ೧೦ ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿರಲು ಕಾರಣವೂ ಆಗಿತ್ತು. ಆದರೆ ಪ್ರಸ್ತುತ ಬ್ಲಾಕ್ ಕಾಂಗೈ ಅಧ್ಯಕ್ಷರುಗಳ ಸೋಮಾರಿತನವೋ ಅಥವಾ ನಿರುತ್ಸಾಹವೋ ಗೊತ್ತಿಲ್ಲ, ಒಟ್ಟಾರೆ ಕಾಂಗ್ರೆಸ್ ಸಂಘಟನೆಯ ಕೊರತೆಯನ್ನು ಎದುರಿಸುತ್ತಿದ್ದು, ಉತ್ಸಾಹಿ ಯುವಕರ ಕೈಗೆ ಕಾಂಗ್ರೆಸ್ ಅಧಿಕಾರ ಸಿಗಬೇಕಾಗಿದೆ.
ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ನಡೆಯುತ್ತಿದ್ದು, ಯುವಕರಿಗೆ ಹಾಗೂ ನಿಷ್ಟಾವಂತ ಕಾರ್ಯಕರ್ತರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂಬ ಕೂಗು ಹಬ್ಬಿದ್ದು, ಇದರಲ್ಲಿ ಯಾದವ ಸಮುದಾಯದ ಪ್ರಬಲ ಟಿಕೆಟ್ ಆಕಾಂಕ್ಷಿ ಸಾಸಲು ಸತೀಶ್, ಕುಂಚಿಟಿಗ ಸಮುದಾಯದ ಕೆ. ಮಲ್ಲಣ್ಣನವರ ಪುತ್ರ ಸತೀಶ್ ಕೆ ಮಲ್ಲಣ್ಣ ಸೇರಿದಂತೆ ಕೆಲವೊಂದು ಉದ್ಯಮಿಗಳ ಹೆಸರು ತಳಕು ಹಾಕಿವೆ. ಒಟ್ಟಾರೆ ಈ ಹಿಂದೆ ಜೆಡಿಎಸ್‌ನಲ್ಲಿ ಟಿಕೆಟ್ ಪಡೆಯುವಾಗ ಸಜ್ಜನ ರಾಜಕಾರಿಣಿ ಬಿ.ಎಸ್. ಸತ್ಯನಾರಾಯಣ ಅವರು ಪಟ್ಟ ಶ್ರಮ ಕಾಂಗ್ರೆಸ್‌ನಲ್ಲಿ ಮರುಕಳಿಸುವಂತಾಗಿದೆ.