ಕಾಡುಗಳ ಸಂರಕ್ಷಣೆ, ಸಂವರ್ಧನೆಯಾಗಬೇಕಿದೆ-ಈರಣ್ಣ ಬೆಂಗಾಲಿ

ರಾಯಚೂರು.ಏ.೦೧-ಹೆಚ್ಚುತ್ತಿರುವ ಜನಸಂಖ್ಯೆಯಿಂದ ಕಾಡುಗಳ ನಾಶವಾಗುತ್ತಿದ್ದು, ಕಾಡುಗಳ ಸಂರಕ್ಷಣೆ ಮತ್ತು ಸಂವರ್ಧನೆಯಾಗಬೇಕಿದೆ ಎಂದು ಪರಿಸರ ಪ್ರೇಮಿ ಈರಣ್ಣ ಬೆಂಗಾಲಿ ಅವರು ಹೇಳಿದರು.
ರಾಯಚೂರು ತಾಲೂಕಿನ ಹೀರಾಪೂರದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಪಾಂಡುರಂಗ ಹೆಗಡೆ ಇಕೋ ಕ್ಲಬ್‌ನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ ಪರಿಸರದ ಬಗ್ಗೆ ನಾವೆಲ್ಲಾ ಹೆಚ್ಚು ಹೆಚ್ಚು ಕಾಳಜಿ ವಹಿಸುವುದು ಅವಶ್ಯಕವಾಗಿದೆ. ಇಲ್ಲವಾದಲ್ಲಿ ಉಸಿರುಗಟ್ಟುವಂತಹ ಪರಿಸ್ಥಿತಿ ಎದುರಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು. ಕಾಡುಗಳ ನಾಶದಿಂದ ಕಾಡು ಪ್ರಾಣಿಗಳು ನಾಡಿಗೆ ನುಗ್ಗುತ್ತಿವೆ ಅಲ್ಲದೆ ಬಿಸಿಲು ವಿಪರೀತವಾಗಿ ಹೆಚ್ಚಾಗುತ್ತಿದೆ. ಇಂತಹ ಕೇಡುಗಳು, ದುಷ್ಪರಿಣಾಮಗಳು ಸಂಭವಿಸುತ್ತಿವೆ. ಇವುಗಳಿಗೆಲ್ಲಾ ಒಂದೇ ಪರಿಹಾರ ಪರಿಸರವನ್ನು ಕಾಪಾಡುವುದು ಎಂದು ಹೇಳುತ್ತಾ ಪ್ಲಾಸ್ಟಿಕ್ ತ್ಯಜಿಸಬೇಕು, ನೀರನ್ನು ಮಿತವಾಗಿ ಬಳಸಬೇಕು ಎಂದು ವಿದ್ಯಾರ್ಥಿಗಳಿಗೆ ವ್ಯಂಗ್ಯಚಿತ್ರಗಳ ಮೂಲಕ ಮನವರಿಕೆ ಮಾಡಿಕೊಟ್ಟರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪಕ್ಷಿಪ್ರೇಮಿ ಸಲ್ಲಾವುದೀನ್ ಅವರು ಪಕ್ಷಿ ಸಂಕಲುದ ಬಗ್ಗೆ ನಾವೆಲ್ಲಾ ಕಾಳಜಿವಹಿಸಬೇಕಾಗಿದೆ. ಈ ಬೇಸಿಗೆಯಲ್ಲಿ ಮಾನವೀಯತೆ ಇರುವ ಪ್ರತಿಯೊಬ್ಬರು ನಿಮ್ಮ ನಿಮ್ಮ ಮನೆಯ ಮೇಲೆ ತಪ್ಪದೇ ಪಕ್ಷಿಗಳಿಗೆ ನೀರು ಕುಡಿಯಲು ವ್ಯವಸ್ಥೆ ಮಾಡಬೇಕು. ಪರಿಸರದಲ್ಲಿ ಪಕ್ಷಿಗಳ ಮಹತ್ವವನ್ನು ನಾವು ಅರಿಯಬೇಕು. ಪಕ್ಷಿಗಳನ್ನು ಉಳಿಸಬೇಕು ಎಂದು ಮನವಿ ಮಾಡಿದರು. ಪಕ್ಷಿಗಳಿಗೆ ನೀರುಣಿಸುವ ವಿಶೇಷವಾದ ಬಾಟಲಿಗಳನ್ನು ತಯಾರಿಸುವ ಪ್ರಾತಕ್ಷಿಕತೆಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ ಶಾಲೆಯ ಮುಖ್ಯಗುರುಗಳಾದ ಪಂಪಣ್ಣ ಅವರು ಮಾತನಾಡಿ, ಈ ಕಾರ್ಯಕ್ರಮದಿಂದ ಪ್ರೇರಿತಗೊಂಡು ನಾವೆಲ್ಲಾ ಸಸಿಗಳನ್ನು ನೆಡಲು ಮುಂದಾಗಬೇಕು. ಇರುವ ಗಿಡ,ಮರಗಳನ್ನು ಉಳಿಸಿಕೊಂಡು ಹೋಗಬೇಕು. ಪಕ್ಷಿಗಳನ್ನು ಒಳಗೊಂಡಂತೆ ಸಕಲ ಜೀವರಾಶಿಗಳ ಬಗ್ಗೆ ನಾವು ದಯೆ ತೋರಬೇಕು. ಪರಿಸರದ ಬಗ್ಗೆ ಕಾಳಜಿಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಆರಂಭದಲ್ಲಿ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು ಮತ್ತು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಜೊತೆಗೆ ಪರಿಸರದ ಸಂಬಂಧಪಟ್ಟಂತೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ತಾಲೂಕ ಪಂಚಾಯಿತಿಯ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಹನುಮಯ್ಯ ಸಾಹುಕಾರ, ಎಸ್‌ಡಿಎಂಸಿ ಅಧ್ಯಕ್ಷರಾದ ಪೇಂಟರ್ ಹನುಮಂತು, ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಮುಖಂಡರಾದ ನೀಲಪ್ಪಗೌಡ, ಶಿಕ್ಷಣ ಇಲಾಖೆಯ ಬಿಆರ್‌ಪಿ ಸೋಮಶೇಖರ, ಸಿಆರ್‌ಪಿ ಆನಂದ ಅವರು ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು, ಸಹ ಶಿಕ್ಷಕರು, ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ನಿರೂಪಣೆಯನ್ನು ರವೀಂದ್ರ ಸಹಶಿಕ್ಷಕರು, ವಂದನಾರ್ಪಣೆಯನ್ನು ಖಾದ್ರಿ ಸಹಶಿಕ್ಷಕರು ಮಾಡಿದರು.