ಕಾಡಿನಲ್ಲಿ ಸಿಲುಕಿದ್ದ ಗರ್ಭಿಣಿಯರ ರಕ್ಷಣೆ

ತ್ರಿಶೂರ್, ಆ. ೬ -ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಡುವೆ ಕಾಡಿನಲ್ಲಿ ಸಿಲುಕಿದ್ದ ಮೂವರು ಗರ್ಭಿಣಿಯರನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.
ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದರಿಂದ ಮೂವರಲ್ಲಿ ಓರ್ವ ಗರ್ಭಿಣಿ ಕಾಡಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಸುರಕ್ಷಿತವಾಗಿದ್ದಾರೆ. ಇಬ್ಬರು ಮಹಿಳೆಯರ ಪೈಕಿ ಒಬ್ಬರು ಆರು ಮತ್ತು ಮತ್ತೊಬ್ಬರು ಏಳು ತಿಂಗಳ ಗರ್ಭಿಣಿಯಾಗಿದ್ದಾರೆ.
ಕಾಡಿನ ಮಧ್ಯೆ ಸಿಲುಕಿದ್ದ ಮಹಿಳೆಯರನ್ನು ಅರಣ್ಯ ಇಲಾಖೆ ಹಾಗೂ ಪೊಲೀಸರ ನೆರವಿನಿಂದ ಸುರಕ್ಷಿತವಾಗಿ ಅವರ ಊರುಗಳಿಗೆ ಸ್ಥಳಾಂತರ ಮಾಡಲಾಗಿದ್ದು ಜಿಲ್ಲಾ ವೈದ್ಯಾಧಿಕಾರಿ ನೇತೃತ್ವದ ತಂಡ ಮೂವರಿಗೆ ಮನವರಿಕೆ ಮಾಡಿಕೊಟ್ಟು ನಂತರ ಚಾಲಕುಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಗರ್ಬಿಣಿಯರನ್ನು , ರಕ್ಷಿಸಿದ ತಂಡವನ್ನು ಅಭಿನಂದಿಸಿದ್ದಾರೆ
ಭಾರೀ ಮಳೆಯ ಹಿನ್ನೆಲೆಯಲ್ಲಿ, ರಾಜ್ಯ ಜಲ ಪ್ರಾಧಿಕಾರ ಮಲಂಪುಳ ಅಣೆಕಟ್ಟಿನ ನಾಲ್ಕು ಗೇಟ್ ತೆರೆದು ನೀರು ಬಿಟ್ಟಿದೆ. ಮುಕ್ಕೈಪುಳ, ಕಲ್ಪತಿಪುಳ ಮತ್ತು ಭರತಪುಳ ನದಿಗಳ ದಡದಲ್ಲಿ ವಾಸಿಸುವ ಮಂದಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಇನ್ನೂ ಮೂರು ದಿನ ಮಳೆ:
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಆ. ೮ ರವರೆಗೆ ಕೇರಳದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಕಣ್ಣೂರಿನಲ್ಲಿ ಮಳೆ ನೀರು ನುಗ್ಗಿದ್ದರಿಂದ ಹಲವಾರು ಮನೆಗಳು ಕುಸಿದು ಭಾಗಶಃ ಹಾನಿಗೀಡಾಗಿವೆ. ಕಡಲುಂಡಿ,, ಭರತಪುಳ ಗಾಯತ್ರಿಪುಳ ನದಿಗಳ ನೀರಿನ ಮಟ್ಟ ಎಚ್ಚರಿಕೆಯ ಮಟ್ಟ ತಲುಪಿದೆ.