ಕಾಡಾ ಅಧ್ಯಕ್ಷರಾಗಿ ಪಿ.ಮರಿಸ್ವಾಮಿ ಅಧಿಕಾರ ಸ್ವೀಕಾರ

ಸಂಜೆವಾಣಿ ವಾರ್ತೆ
ಚಾಮರಾಜನಗರ.ಮಾ.05:- ಕಾವೇರಿ ಜಲಾನಯನ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ(ಕಾಡಾ) ಅಧ್ಯಕ್ಷರಾಗಿ ಪಿ. ಮರಿಸ್ವಾಮಿ ಅವರು ಇಂದು ಮೈಸೂರಿನ ಕಾಡಾ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಬಳಿಕ ಮಾತನಾಡಿದ ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮತ್ತು ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ನನ್ನ ಸೇವೆಯನ್ನು ಗುರುತಿಸಿ ಕಾಡಾ ಅಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ. ನನ್ನ ಹೆಸರನ್ನು ಶಿಫಾರಸ್ಸು ಮಾಡಿದ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರು, ಎಲ್ಲಾ ಶಾಸಕರು, ಮಾಜಿ ಶಾಸಕರು, ಮುಖಂಡರಿಗೆ ನಾನು ಅಭಾರಿಯಾಗಿದ್ದೇನೆ. ಅವರಿಗೆ ಈ ಮುಖಾಂತರ ಕೃತಜ್ಞತೆಯನ್ನು ಸಲ್ಲಿಸುವುದಾಗಿ ತಿಳಿಸಿದರು.
ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಕಾಡಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಮುಂದಾಗಲಿದ್ದೇನೆ. ಹೆಚ್ಚು ಅನುದಾನ ತಂದು ರೈತರಿಗೆ, ಸಾರ್ವಜನಿಕರಿಗೆ ಉತ್ತಮ ಕೆಲಸ ಮಾಡಲಿದ್ದೇನೆ ಎಂದರು.
ಚಾಮರಾಜನಗರ, ಮೈಸೂರು ಜಿಲ್ಲೆಯಲ್ಲಿ ಬರ ಆವರಿಸಿದೆ. ರೈತರ ಕಷ್ಟ ಸುಖಗಳ ಬಗ್ಗೆ ಅರಿವು ಅನುಭವ ನನಗೆ ಇದೆ. ಈ ನಿಟ್ಟಿನಲ್ಲಿ ರೈತರ ಏಳಿಗೆಗೆ ಪೂರಕವಾಗಿರುವ ಕಾರ್ಯಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸುವೆ ಎಂದು ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ತಿಳಿಸಿದರು.
ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಚ್.ಎಂ. ಗಣೇಶ ಪ್ರಸಾದ್, ದರ್ಶನ್ ಧ್ರುವನಾರಾಯಣ್, ಡಾ. ಡಿ. ತಿಮ್ಮಯ್ಯ, ಮಾಜಿ ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಜಿ.ಎನ್. ನಂಜುಂಡಸ್ವಾಮಿ, ಮಾಜಿ ಸಂಸದರಾದ ಎಂ. ಶಿವಣ್ಣ, ಮುಖಂಡರಾದ ಬಿ.ಕೆ. ರವಿಕುಮಾರ್, ಎಚ್.ಸಿ. ಬಸವರಾಜು, ಆರ್. ಚಿಕ್ಕಮಹದೇವು ಇನ್ನಿತರ ಮುಖಂಡರು ಈ ಸಂದರ್ಭದಲ್ಲಿ ಶುಭ ಕೋರಿದರು.