ಕಾಡಾನೆ ‘ಭೀಮ ಹಠಾತ್ ದಾಳಿ; ಶಾರ್ಪ್ ಶೂಟರ್ ವೆಂಕಟೇಶ್ ಸಾವು

ಹಾಸನ,ಆ.31- ಆಲೂರು ತಾಲ್ಲೂಕಿನ ಹಳ್ಳಿಯೂರು ಗ್ರಾಮದಲ್ಲಿ ಕಾಡಾನೆ ಹಠಾತ್ ನಡೆಸಿದ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಶಾರ್ಪ್ ಶೂಟರ್ ವೆಂಕಟೇಶ್ ಸಾವನ್ನಪ್ಪಿದ್ದಾರೆ.


ಕಾಡಾನೆ ‘ಭೀಮ’ ವೆಂಕಟೇಶ್ ಮೇಲೆ ಏಕಾಏಕಿ ದಾಳಿ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಹಲವು ದಿನಗಳಿಂದ ಗಾಯಗೊಂಡು ಓಡಾಡುತ್ತಿದ್ದ ‘ಭೀಮ’ ಕಾಡಾನೆಗೆ ಹೆಚ್ಚಿನ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಮುಂದಾಗಿತ್ತು. ಇದೇ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಶಾರ್ಪ್ ಶೂಟರ್ ಗಳನ್ನು ಬಳಸಿಕೊಂಡು ಭೀಮನ ಸೆರೆ ಹಿಡಿಯಲು ಮುಂದಾಗಿದ್ದರು.
ಈ ಸಂದರ್ಭದಲ್ಲಿ ಆಲೂರು ಸಮೀಪದ ಹಳ್ಳಿಯೂರಿನಲ್ಲಿ ಕಾಡಾನೆಗೆ ಅರೆವಳಿಕೆ ಮದ್ಧು ನೀಡಲು ಶಾರ್ಪ್ ಶೂಟರ್ ವೆಂಕಟೇಶ್ ಮುಂದಾದಾಗ ಏಕಾಏಕಿ ಬಂದ ಕಾಡಾನೆ ವೆಂಕಟೇಶ್ ರವರನ್ನು ತುಳಿದು ಹಾಕಿದೆ. ಇದರಿಂದ ವೆಂಕಟೇಶ್ ಗಂಭೀರ ಗಾಯಗೊಂಡಿದ್ದಾರೆ.
ತಕ್ಷಣವೇ ವೆಂಕಟೇಶ್ ಅವರನ್ನು ಹಾಸನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಕೆಲವು ಗಂಟೆಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಅಸುನೀಗಿದ್ದಾರೆ.
ಅರಣ್ಯ ಇಲಾಖೆಯಲ್ಲಿ ಶಾರ್ಪ್ ಶೂಟರ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ರಾಜ್ಯದ ಎಲ್ಲೇ ಆನೆ ದಾಳಿ ಆದಾಗಲೂ ಅರೆವಳಿಕೆ ಚುಚ್ಚಲು ತೆರಳುತ್ತಿದ್ದರು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.