ಕಾಡಾನೆ ದಾಳಿ ಪ್ರದೇಶಕ್ಕೆ ಸಿ.ಪುಟ್ಟರಂಗಶೆಟ್ಟಿ, ರಮೇಶ್ ಭೇಟಿ: ಬೆಳೆಹಾನಿ ಪರಿಶೀಲನೆ

ಚಾಮರಾಜನಗರ, ಜ18:- ಚಾಮರಾಜನಗರ ತಾಲೂಕಿನ ವಡ್ಗಲ್‍ಪುರ ಗ್ರಾಮ ವ್ಯಾಪ್ತಿಯ ವಿವಿಧ ಭಾಗಗಳಿಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಇಂದು ಭೇಟಿ ನೀಡಿ ಕಾಡಾನೆಗಳ ದಾಳಿಯಿಂದ ಆಗಿರುವ ಬೆಳೆ ಹಾನಿಯನ್ನು ಪರಿಶೀಲಿಸಿದರು.
ಆನೆಗಳ ದಾಳಿಯಿಂದ ಹಾನಿ ಗೀಡಾಗಿರುವತೆಂಗು, ಬಾಳೆ, ಇತರೆ ಬೆಳೆಗಳನ್ನು ವೀಕ್ಷಿಸಿದರು. ಆನೆಗಳು, ಇತರೆ ಪ್ರಾಣಿಗಳ ಹಾವಳಿಯಿಂದ ಬೆಳೆಗೆ ತೊಂದರೆಯಾಗುತ್ತಿರುವ ಬಗ್ಗೆ ಸ್ಥಳೀಯರು ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಅಳಲು ತೋಡಿಕೊಂಡರು.
ತಮಿಳುನಾಡು ಭಾಗದಿಂದ ಬರುವ ಕಾಡಾನೆಗಳು ಈ ಭಾಗದ ಬೆಳೆಗಳನ್ನು ನಾಶ ಮಾಡುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಆನೆಗಳು ದಾಳಿ ಮಾಡದಂತೆ ತಡೆಯೊಡ್ಡಬೇಕೆಂದು ಗ್ರಾಮಸ್ಥರು ಹೇಳಿದರು.
ಆನೆಗಳ ದಾಳಿಯಿಂದ ನಾಶವಾಗಿರುವ ಬೆಳೆಗಳಿಗೆ ಸಮರ್ಪಕವಾಗಿ ಪರಿಹಾರ ನೀಡಬೇಕು. ಆನೆ ಸೇರಿದಂತೆಇತರೆ ಪ್ರಾಣಿಗಳ ಹಾವಳಿಯನ್ನು ತಡೆಯಬೇಕು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕಾಡು ಪ್ರಾಣಿಗಳ ದಾಳಿ ತಪ್ಪಿಸಲು ಅಗತ್ಯ ಸಿಬ್ಬಂದಿ ನಿಯೋಜಿಸಬೇಕು. ಪ್ರಾಣಿಗಳ ಹಾವಳಿ ನಿಯಂತ್ರಿಸುವ ಸಲುವಾಗಿ ಸೂಕ್ತವಿರುವ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾಡಂಚಿನ ಗ್ರಾಮಗಳಿಗೆ ಸೂಕ್ತ ಸೌಕರ್ಯಗಳನ್ನು ಒದಗಿಸಬೇಕುಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹಾನಿಗೀಡಾದ ಬೆಳೆ ವೀಕ್ಷಿಸಿ ಜನರ ಅಹವಾಲು ಆಲಿಸಿದ ಜಿಲ್ಲಾಧಿಕಾರಿಡಿ.ಎಸ್. ರಮೇಶ್‍ಅವರು ಬೆಳೆ ನಾಶವಾಗಿರುವ ಬಗ್ಗೆ ಪರಿಹಾರ ಒದಗಿಸಲು ಕ್ರಮವಹಿಸಲಾಗುತ್ತದೆ. ಈ ಭಾಗಗಳಲ್ಲಿ ಎರಡು ತಂಡಗಳನ್ನು ಗಸ್ತು ವಹಿಸಲು ಸೂಚಿಸಲಾಗಿದೆ. ಆನೆ ತಡೆಕಂದಕ ನಿರ್ಮಾಣದಂತಹ ಕ್ರಮದಿಂದ ದಾಳಿ ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಸಹಕರಿಸಬೇಕು ಎಂದರು.
ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ದೀಪಾ ಕಂಟ್ರಾಕ್ಟರ್, ತಹಶೀಲ್ದಾರ್ ಬಸವರಾಜು, ಇತರೆ ಅಧಿಕಾರಿಗಳು ಇದ್ದರು.