ಕಾಡಸಿದ್ದೇಶ್ವರ ಮಠಕ್ಕೆ ಡಿಕೆಶಿ ಭೇಟಿ

ಬೆಂಗಳೂರು,ಮೇ೧೪:ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದು, ತಮ್ಮ ನಂಬಿಕೆಯ ದೈವ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಇಂದು ಬೆಳಿಗ್ಗೆ ಬೆಂಗಳೂರಿನಿಂದ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠಕ್ಕೆ ಆಗಮಿಸಿದ ಅವರು, ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ನಂತರ ವೃಷಭದೇಶೀಕೇಂದ್ರ ಸ್ವಾಮೀಜಿಗಳ ಆರ್ಶೀವಾದ ಪಡೆದುಕೊಂಡರು.
ಅಭಿಮಾನಿಗಳ ಮೇಲೆ ಗರಂ
ಈ ಸಂದರ್ಭದಲ್ಲಿ ಮುಂದಿನ ಮುಖ್ಯಮಂತ್ರಿ ಸಿಎಂ ಎಂದು ಘೋಷಣೆ ಕೂಗಿ ಹಾರ ಹಾಕಲು ಬಂದ ಅಭಿಮಾನಿಗಳ ಮೇಲೆ ಗರಂ ಆದ ಡಿ.ಕೆ. ಶಿವಕುಮಾರ್, ಇದು ದೇವಾಲಯ ಇಲ್ಲಿ ಗಲಾಟೆ ಮಾಡಬೇಡಿ. ಹಾರವನ್ನು ದೇವರಿಗೆ ಹಾಕಿ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಕಾಡಸಿದ್ದೇಶ್ವರ ಮಠ ಪುಣ್ಯಕ್ಷೇತ್ರ. ಪ್ರತಿ ಸಂದರ್ಭದಲ್ಲೂ ಶ್ರೀಗಳು ನಮಗೆ ಮಾರ್ಗದರ್ಶನ ಮಾಡಿದ್ದಾರೆ. ಟಿಕೆಟ್ ಹಂಚಿಕೆ ಸೇರಿ ಎಲ್ಲ ತೀರ್ಮಾನಗಳನ್ನು ಇಲ್ಲೇ ಮಾಡಿದ್ದೆ. ಗುರು ಇಲ್ಲದೆ ಗುರಿ ತಲುಪಲು ಸಾಧ್ಯವಿಲ್ಲ. ಗುರುಗಳು ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಮಾರ್ಗದರ್ಶನ ನೀಡಿದರು ಎಂದರು.