
ಕಲಬುರಗಿ,ಮಾ.18-ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೆಯಾದ ಘನತೆ ಗೌರವವಿದೆ. ಅಲ್ಲದೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 5 ಲಕ್ಷ ರೂ. ಅನುದಾನವೂ ಇದೆ. ಅದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಆಮಂತ್ರಿತ ಕಲಾತಂಡಗಳಿಗೆ, ಕವಿ, ಸಾಹಿತಿಗಳಿಗೆ ಗೌರವಧನ ಕೊಡುವ ಪದ್ಧತಿ ಮೊದಲಿನಿಂದಲೂ ಇದೆ. ಆಮಂತ್ರಿತರಿಗೆ ಗೌರವಧನವೂ ನೀಡದೆ, ಪರಿಷತ್ತಿನ ಎಲ್ಲ ಸದಸ್ಯರಿಗೆ ಸಮ್ಮೇಳನದ ಆಮಂತ್ರಣದ ಪತ್ರಿಕೆ ಸಹ ಕಳುಹಿಸಿದೆ ಇಷ್ಟೊಂದು ತರಾತುರಿಯಲ್ಲಿ ಕಾಟಾಚಾರದ ಸಮ್ಮೇಳನ ಮಾಡುವ ಅಗತ್ಯವೆನಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ವೀರಭದ್ರ ಸಿಂಪಿ ಪ್ರಶ್ನಿಸಿದ್ದಾರೆ.
ಉತ್ತಮ ನೆನಪಿನ ಕಾಣಿಕೆ, ಸ್ಮರಣ ಸಂಚಿಕೆ, ಕಿಟ್ ಮೊದಲಿನಿಂದಲೂ ಕೊಡುತ್ತಾ ಬರಲಾಗಿದೆ. ಕಳೆದ ವರ್ಷ ಕಮಲಾಪುರದಲ್ಲಿ ನಡೆದ ಜಿಲ್ಲಾ ಸಮ್ಮೇಳನ ಹಾಗೂ ಇದೇ ತಿಂಗಳ ಜಿಡಗಾದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಸಾಮಾನ್ಯ ವೆಚ್ಚವೂ ಮಾಡಿಲ್ಲ, ಎಲ್ಲ ಅಳೆದು ತೂಗಿದರೆ 50 ಸಾವಿರ ರೂ. ಸಹ ಖರ್ಚಾಗಿಲ್ಲ. ಶಾಸಕರ ನೆರವು, ಶ್ರೀಮಠದ ನೆರವು, ದಾನಿಗಳ ನೆರವು ಈ ಹಣ ಯಾವ ಉದ್ದೇಶಕ್ಕೆ , ಹೇಗೆ ಬಳಕೆಯಾಗಬೇಕು ಗೊತ್ತಿಲ್ಲವೇ, ಸಿಕ್ಕ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ಕೆಲಸ ಮಾಡಬೇಕು. ಎಲ್ಲವನ್ನೂ ಅಳೆದು ತೂಗಿ ನೋಡುವ ಜನರಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಿಂಪಿ ತಿಳಿ ಹೇಳಿದ್ದಾರೆ.
ಈ ಹಿಂದೆ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕೇವಲ 10 ಸಾವಿರ ರೂ. ಅನುದಾನ ಇತ್ತು. ಅಂದು ಜನರ ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಇದೀಗ 5 ಲಕ್ಷ ರೂ. ಅನುದಾನವಿದೆ. ಆ ಹಣವನ್ನು ಹಾಗೂ ದಾನಿಗಳು ನೀಡಿರುವ ಹಣವನ್ನು ಸರಿಯಾಗಿ ಬಳಕೆ ಮಾಡಿಕೊಂಡು ಅರ್ಥಪೂರ್ಣ ಸಮ್ಮೇಳನ ನಡೆಸಬೇಕಾಗಿರುವುದು ಹಾಲಿ ಅಧ್ಯಕ್ಷರ ಕರ್ತವ್ಯವಾಗಿದೆ. ಕೊಟ್ಟ 5 ಲಕ್ಷ ರೂ.ದಲ್ಲೇ ಭಾರಿ ಸಮ್ಮೇಳನ ಮಾಡಬಹುದು. ಕವಿಗಳು, ಕಲಾವಿದರಿಗೆ ಕನಿಷ್ಠ ಗೌರವಧನವೂ ನೀಡದಿರುವುದು ಆಶ್ಚರ್ಯ ತಂದಿದೆ. ಹಾಗಾದರೆ ಆ 5 ಲಕ್ಷ ಅನುದಾನ, ದೇಣಿಗೆ ಹಣ ಎಲ್ಲಿ ಹೋಯಿತು ? ಕಮಲಾಪುರದಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಳ್ಳದೆ ಪುನಃ ಹೆಚ್ಚಿನ ತಪ್ಪುಗಳು ಮಾಡಿರುವ ಈ ಸಮ್ಮೇಳನಗಳ ಅವ್ಯವಸ್ಥೆಯ ಉದ್ದೇಶಗಳಿಗೆ ಕಸಾಪ ಅಧ್ಯಕ್ಷರು ಉತ್ತರ ನೀಡಬೇಕು ಎಂದು ಸಿಂಪಿ ಆಗ್ರಹಿಸಿದ್ದಾರೆ.