ಕಾಗೆಗಳ ನಿಗೂಢ ಸಾವು ಪ್ರಕರಣ: ʻಹಕ್ಕಿ ಜ್ವರದ ಯಾವುದೇ ಲಕ್ಷಣಗಳಿಲ್ಲʼ

ಕೊಣಾಜೆ, ಜ.೯- ಇಲ್ಲಿನ ಮಂಜನಾಡಿ ಗ್ರಾಮದ ಆರಂಗಡಿ ಬಳಿ ಆರಕ್ಕೂ ಅಧಿಕ ಕಾಗೆಗಳ ನಿಗೂಢ ಸಾವಿನ ಕಾರಣ ಕಾರಣ ಕಂಡುಹಿಡಿಯಲು ಮಾದರಿಗಳನ್ನು ಜ.5 ರಂದು ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಹಾಗೂ ಜೈವಿಕ ಸಂಸ್ಥೆಗೆ ಕಳುಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜ.8ರ ಶುಕ್ರವಾರದಂದು ವರದಿ ಬಂದಿದ್ದು, ವರದಿಯಲ್ಲಿ ಹಕ್ಕಿ ಜ್ವರದ ಯಾವುದೇ ಲಕ್ಷಣಗಳಿಲ್ಲ ಎಂದು ದೃಢಪಟ್ಟಿದೆ.

ಮಂಜನಾಡಿ ಗ್ರಾಮದಲ್ಲಿ ಕಾಗೆಗಳು ಸತ್ತುಬಿದ್ದ ಹಿನ್ನೆಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಲವು ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿತ್ತು. ಮಂಜನಾಡಿ ಗ್ರಾಮದ ಅರಂಗಡಿ ಪ್ರದೇಶಕ್ಕೆ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಐದು ಕಾಗೆಗಳು ಸತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕಾಗೆಗಳ ಕಳೆಬರಹವನ್ನು ಗುಂಡಿ ತೋಡಿ ಹೂಳಲು ನಿರ್ದೇಶಿಸಲಾಗಿದೆ. ಹಾಗೂ ಸುತ್ತಲಿನ ಪ್ರದೇಶಕ್ಕೆ ಕೀಟನಾಶಕ ಸಿಂಪಡಿಸಲು ಸೂಚಿಸಲಾಗಿತ್ತು.

ʻಯಾವುದೇ ಲಕ್ಷಣಗಳಿಲ್ಲʼ

ಮಂಜನಾಡಿ ಪ್ರದೇಶದಲ್ಲಿ ಇತ್ತೀಚೆಗೆ ಸತ್ತಿದ್ದ ಕಾಗೆಗಳಲ್ಲಿ ಹಕ್ಕಜ್ವರ ಪತ್ತೆಯಾಗಿಲ್ಲ. ಜ.5ರಂದು ಮಂಗಳೂರು ತಾಲೂಕಿನ ಮಂಜನಾಡಿ ಗ್ರಾಮದಲ್ಲಿ ಸತ್ತ ಕಾಗೆಯ ಹೆಚ್ಚಿನ ಮಾಹಿತಿಗಾಗಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಬೆಂಗಳೂರಿಗೆ ಕಳುಹಿಸಲಾಗಿತ್ತು. ಕಾಗೆಯ ಕಳೆಬರದ ವರದಿ ಶುಕ್ರವಾರ ಪ್ರಕಟವಾಗಿದ್ದು, ಹಕ್ಕಿಜ್ವರ (ಏವಿಯನ್ ಇನ್‌ಫ್ಲುಯೆಂಜ) ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.