ಕಾಗಿನೆಲೆ ಕನಕ ಗುರುಪೀಠದಿಂದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ

ಬೆಂಗಳೂರು,ಆ.೧೩- ಕಾಗಿನೆಲೆ ಮಹಾ ಸಂಸ್ಥಾನದ ಕನಕ ಗುರುಪೀಠದಿಂದ ಬೆಂಗಳೂರಿನ ಚಂದ್ರಾಲೇಔಟ್‌ನಲ್ಲಿ ನಾಳೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ ೯೦ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಎನ್‌ಐಟಿಯಲ್ಲಿ ದೇಶಕ್ಕೆ ಮೂರನೇ ಸ್ಥಾನ ಪಡೆದಿರುವ ಆಶೀನ್ ನರೇಸ್ ಅರಸು, ರಾಷ್ಟ್ರೀಯ ಯೋಗಪಟು ಎಸ್. ಬೆನಕರಾಜು, ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿರುವ ಕೆ. ವೀಕ್ಷಿತ್ ಅವರಿಗೆ ಕನಕಚೇತನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಕಾಗಿನೆಲೆ ಕ್ಷೇತ್ರದ ಜಗದ್ಗುರು ನಿರಂಜನಾನಂದಪುರಿ ಮಹಾ ಸ್ವಾಮೀಜಿ ಅವರು ಈ ಕುರಿತು ಮಾಹಿತಿ ನೀಡಿ, ೨೦ ವರ್ಷಗಳ ಹಿಂದೆ ಹೊಸದುರ್ಗ ಮಠದಲ್ಲಿ ೩೦ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿತ್ತು. ಈ ಕಾರ್ಯಕ್ರಮ ಇಂದು ದೊಡ್ಡ ಮಟ್ಟಕ್ಕೆ ಬೆಳೆದಿದ್ದು, ಇದೀಗ ಬೆಂಗಳೂರಿನ ಶಾಖೆಯಲ್ಲಿ ೭೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕರಾದ ಪ್ರಿಯಾ ಕೃಷ್ಣ, ಬಿ.ಜಿ. ಗೋವಿಂದಪ್ಪ, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಬಂಡೆಪ್ಪ ಕಾಶೆಂಪೂರ್, ಆರ್. ಕೃಷ್ಣಪ್ಪ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ. ರವಿ ಮತ್ತಿತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.