ಕಾಗವಾಡ ಮತಕ್ಷೇತ್ರದಲ್ಲಿ ಶಿಕ್ಷಣ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಮೊದಲ ಆದ್ಯತೆ : ಶ್ರೀಮಂತ ಪಾಟೀಲ

ಕಾಗವಾಡ :ನ.4: ನನ್ನ ಮತಕ್ಷೇತ್ರದಲ್ಲಿ ಯಾರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಕಳೆದ ಒಂದು ವರ್ಷದ ಅವಧಿಯಲ್ಲಿ 180 ಶಾಲಾ ಕೋಣೆಗಳಿಗೆ ಮಂಜೂರಾತಿ ಪಡೆದುಕೊಂಡು ಈಗಾಗಲೇ ಎಲ್ಲವು ನಿರ್ಮಾಣಗೊಂಡು ಉದ್ಘಾಟನೆ ಗೊಳಿಸಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿಯೇ ಕಾಗವಾಡ ಮತಕ್ಷೇತ್ರ ಅತ್ಯಧಿಕ ಶಾಲೆ ಕೋಣೆಗಳನ್ನು ಮಂಜೂರಾತಿ ಪಡೆದುಕೊಂಡ ಏಕೈಕ ವಿಧಾನಸಭಾ ಕ್ಷೇತ್ರ ಎಂದು ಶಾಸಕ ಶ್ರೀ ಮಂತ ಪಾಟೀಲ ಅವರು ಹೇಳಿದರು
ಅವರು ಕಾಗವಾಡ ಮತಕ್ಷೇತ್ರದಲ್ಲಿ ಬರುವ ಮಂಗಾವತಿ, ಶೇಡಬಾಳ, ಶೇಡಬಾಳ ಸ್ಟೇಷನ್, ಲೋಕುರ, ಕಲ್ಲಾಳ ಮೊದಲಾದ ಗ್ರಾಮಗಳಲ್ಲಿ ನಬಾರ್ಡ್ ಆರ್.ಆಯ್.ಡಿ.ಇ. ಯೋಜನೆಯಡಿಯಲ್ಲಿ ನಿರ್ಮಾಣಗೊಂಡಿರುವ ಆಧುನಿಕ ಪದ್ದತಿಯ ಸುಸಜ್ಜಿತ ಶಾಲಾ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಅವರು ಮುಂದೆ ಮಾತನಾಡುತ್ತಾ ಪ್ರತಿ ಶಾಲೆಗಳಲ್ಲಿ ಸ್ಮಾರ್ಟ್ ಕೋಣೆಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿಯೊಬ್ಬ ರೈತನ ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲಿ ಎಂಬ ಉದ್ದೇಶದಿಂದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಅದೇ ರೀತಿ ರೈತರ ಕೃಷಿ ಜಮೀನುಗಳಿಗೆ ನೀರಾವರಿ ಸೌಲಭ್ಯ, ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಆಸ್ಪತ್ರೆಗಳ ನಿರ್ಮಾಣ, ಕುಡಿಯುವ ನೀರು ಹಾಗೂ ಸಂಚಾರಕ್ಕೆ ತೊಂದರೆಯಾಗದಿರಲಿ ಎಂಬ ಸದುದ್ದೇಶದಿಂದ ಗುಣಮಟ್ಟದ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮಂಗಾವತಿ ಗ್ರಾಮದಲ್ಲಿ 4 ಕೋಣೆಗಳು, ಶೇಡಬಾಳದಲ್ಲಿ 2 ಕೋಣೆಗಳು, ಶೇಡಬಾಳ ಸ್ಟೇಷನ್‍ದಲ್ಲಿ 2 ಕೋಣೆಗಳು, ಲೋಕುರ ಗ್ರಾಮದಲ್ಲಿ 2 ಕೋಣೆಗಳು, ಕಲ್ಲಾಳದಲ್ಲಿ 2 ಕೋಣೆಗಳನ್ನು ಶಾಸಕರು ಉದ್ಘಾಟಿಸಿದರು.
ಈ ಸಮಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ, ಮಂಗಾವತಿ, ಜುಗೂಳ ಗ್ರಾಮ ಪಂಚಾಯತ ಅಧ್ಯಕ್ಷ ಶಹಜಾನ ನಂದಗಾಂವೆ, ಉಪಾಧ್ಯಕ್ಷ ಕಾಕಾಸಾಬ ಪಾಟೀಲ, ರಾಜಗೌಡ ಪಾಟೀಲ, ಬಸವರಾಜ ನಂದ್ಯಾಳೆ, ಋತುಗೌಡ ಪಾಟೀಲ, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ಸಂಕಪಾಳ, ಆರ್.ಎ.ನಾಂದಣಿ, ಎಲ್.ಕೆ.ಅರವಾಡೆ, ಎಸ್.ಎಸ್.ಭಾವಿ, ಶೇಡಬಾಳ ಪಟ್ಟಣದ ಮುಖ್ಯಾಧಿಕಾರಿ ಎಂ.ಎಸ್.ಕವಲಾಪೂರೆ, ಭರತೇಶ ನರಸಗೌಡರ, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಅವತಾಡೆ, ಸುಭಾಷ ಢಾಲೆ, ಎಂ.ಎ.ಗಣೆ, ಉತ್ಕರ್ಷ ಪಾಟೀಲ, ಎಂ.ಬಿ.ಪಾಟೀಲ ಸೇರಿದಂತೆ ಅನೇಕರು ಇದ್ದರು.