ಕಾಗನೂರು : ಶಿವಲಿಂಗೇಶ್ವರ ರಥೋತ್ಸವ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಫೆ.28: ತಾಲೂಕಿನ ಕಾಗನೂರು ಗ್ರಾಮದಲ್ಲಿ ಶಿವಲಿಂಗೇಶ್ವರ ಸ್ವಾಮಿ ರಥೋತ್ಸವ ಸಂಭ್ರಮದಿಂದ ಜರುಗಿತು.
ವಿಜೃಂಭಣೆಯ ಮೆರವಣಿಗೆಯಲ್ಲಿ ಸಾಗಿ ಬಂದ ಸ್ವಾಮಿಯ ಉತ್ಸವ ಮೂರ್ತಿಯು ರಥಕ್ಕೆ ಪ್ರದಕ್ಷಿಣೆ ಹಾಕಿತು. ಪುರದ ಸಿದ್ಧವೀರೇಶ ಶಿವಾಚಾರ್ಯ ಸ್ವಾಮೀಜಿ, ಹಂಪಸಾಗರದ ಶಿವಲಿಂಗ ರುದ್ರಮುನಿ ಸ್ವಾಮೀಜಿ ಸಾನಿಧ್ಯದಲ್ಲಿ ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ಭಕ್ತರ ಜಯಘೋಷ, ಹರ್ಷೋದ್ಘಾರದ ನಡುವೆ ರಥೋತ್ಸವ ಪ್ರಾರಂಭವಾಯಿತು. ಮುಖ್ಯ ರಸ್ತೆಯಲ್ಲಿ ನೆರೆದಿದ್ದ ಅಪಾರ ಭಕ್ತರು ರಥಕ್ಕೆ ಬಾಳೆಹಣ್ಣು ಎಸೆದು ಭಕ್ತಿಯನ್ನು ಸಮರ್ಪಿಸಿದರು. ಸಮಾಳ, ನಂದಿಕೋಲು, ಮಂಗಳ ವಾದ್ಯಗಳ ನಿನಾದ ರಥೋತ್ಸವಕ್ಕೆ ಕಳೆ ತಂದಿದ್ದವು. ಕಾಗನೂರು ಸುತ್ತಮುತ್ತಲ ಗ್ರಾಮಗಳ ಜನರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಜಿ.ಎಂ.ಗುರುಪಾದಸ್ವಾಮಿ ನೇತೃತ್ವ ವಹಿಸಿದ್ದರು.
ಗ್ರಾಮದ ಮುಖ್ಯ ಬೀದಿಯಲ್ಲಿ ಬೆಳಿಗ್ಗೆ ಕುಂಭೋತ್ಸವ ಜರುಗಿತು. ಮಹಿಳೆಯರು ಶ್ರದ್ದಾಭಕ್ತಿಯಿಂದ ಕುಂಭ ಹೊತ್ತು ಸಾಗಿದರು. ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.