ಕಾಖಂಡಕಿ ಗ್ರಾಮದಲ್ಲಿ ದೇವದಾಸಿ ಮಕ್ಕಳೊಂದಿಗೆ ಹೊಸ ವರ್ಷಾಚರಣೆ ಸಂವಾದ

ವಿಜಯಪುರ, ಜ.3-ಜಿಲ್ಲೆಯಲ್ಲಿ ಮಾಜಿ ದೇವದಾಸಿಯರು ಹಾಗೂ ಅವರ ಮಕ್ಕಳು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಗಮನಿಸಿ ಅವರ ವಾಸ್ತವ ಸ್ಥಿತಿಯನ್ನು ಅರಿಯಲು ಹೊಸ ವರ್ಷಾಚರಣೆ ಹಾಗೂ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ಡಾ. ಅಂಬೇಡ್ಕರ್ ರೂರಲ್ ಡೆವಲಪ್‍ಮೆಂಟ್ ಸೊಸೈಟಿ (ದೇಗಿನಾಳ) ಇವರ ಸಹಯೋಗದೊಂದಿಗೆ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಹಮ್ಮಿಕೊಂಡು ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕಾಖಂಡಕಿ ಗ್ರಾಮದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರೊಂದಿಗೆ ಹೊಸ ವರ್ಷಾಚರಣೆ ಆಚರಿಸುವದರೊಂದಿಗೆ ಅವರ ವಾಸ್ತವಿಕ ಸಮಸ್ಯೆಯನ್ನು ತಿಳಿದುಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕುಮಾರಿ ಐಶ್ವರ್ಯ ಹಂಚಿನಾಳ ಇವಳು ಪಿಯುಸಿ ದ್ವಿತೀಯ ವರ್ಷದಲ್ಲಿ ಓದುವದರೊಂದಿಗೆ ಜಿಲ್ಲಾ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು ಅದರಲ್ಲಿ ಭಾಗವಹಿಸಲು ಸಾಕಷ್ಟು ಆರ್ಥಿಕ ಸಮಸ್ಯೆಯನ್ನು ಎದುರಿಸಿ ಭಾಗವಹಿಸಲು ಸಾಧ್ಯವಾಗಲಿಲ್ಲವೆಂದು ಕಣ್ಣೀರು ಸುರಿಸಿದಳು. ಇದನ್ನು ಕಂಡ ಆ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀಮತಿ ದಾನಮ್ಮ ಗು.ಅಂಗಡಿ ಇವರ ಪತಿ ಗುರಲಿಂಗಪ್ಪ ಅಂಗಡಿಯವರು ಅವಳ ಆರ್ಥಿಕ ಸಹಾಯಕ್ಕಾಗಿ ರೂ.25000/- ಗಳನ್ನು ಕೊಡುವದಾಗಿ ತಿಳಿಸಿದರು. ಅದರಂತೆ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಾದ ಎಸ್.ಆರ್.ಕಟ್ಟಿ ಇವರು ನನ್ನ ಸೂಚನೆ ಮೇರೆಗೆ ಗ್ರಾಮ ಪಂಚಾಯತಿಯಿಂದ ಆರ್ಥಿಕ ಸಹಾಯ ಮಾಡುವದಲ್ಲದೆ ಇತರೆ ಸಮಸ್ಯೆಗಳನ್ನು ಸರಿಪಡಿಸುವದಾಗಿ ತಿಳಿಸಿದರು. ಅದರಂತೆ ಇನ್ನೋರ್ವ ವಿದ್ಯಾರ್ಥಿನಿ ಕುಮಾರಿ ಪಿಯುಸಿ ದ್ವಿತೀಯ ವರ್ಷದಲ್ಲಿ ಓದುತ್ತಿರುವ ಕುಮಾರಿ ಭಾಗ್ಯಾ ತಳಕೇರಿ ಇವಳು ಜಿ.ಕನ್ನಡ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ಕೆ ಆಯ್ಕೆಯಾಗಿದ್ದರು ಸಹಿತ ಭಾಗವಹಿಸಲು ಸಾಧ್ಯವಾಗಲಿಲ್ಲವೆಂದು ಹೇಳಿ ಇದಕ್ಕೂ ಕೂಡಾ ಉತ್ತೇಜನ ನೀಡಲಾಗುವದೆಂದು ತಿಳಿಸಲಾಯಿತು.
ಉಳಿದಂತೆ ವೈಯಕ್ತಿಕ ಮತ್ತು ಸಾಮೂಹಿಕವಾಗಿರುವ ಹತ್ತು ಹಲವಾರು ಸಮಸ್ಯೆಗಳನ್ನು ಬಂದಿದ್ದು, ಅವುಗಳ ಪರಿಹಾರಕ್ಕಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಾದ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಾದ ಶ್ರೀಮತಿ ನಿರ್ಮಲಾ ಸುರಪೂರ, ಜಿಲ್ಲಾ ಪಂಚಾಯತಿ ಸಹಾಯಕ ಯೋಜನಾಧಿಕಾರಿಗಳಾದ ಸಿ.ಬಿ.ಕುಂಬಾರ, ದೇವದಾಸಿ ಪುನರ್ವಸತಿ ಅಭಿವೃದ್ದಿ ನಿಗಮದ ಅಧಿಕಾರಿಗಳಾದ ದೇಸಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರಾದ ಚವ್ಹಾಣ, ಜಿಲ್ಲಾ ಏಡ್ಸ್ ಜಾಗೃತಾ ಸಮಿತಿ ಅಧಿಕಾರಿಗಳಾದ ಧಾರವಾಡಕರ ಹಾಗೂ ಜಿಲ್ಲಾ ಕೌನ್ಸಲರಾದ ರವಿ ಕಿತ್ತೂರ ಇವರುಗಳು ಸಂಬಂಧಿಸಿದ ವಿಷಯಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಪರಿಹಾರ ಕ್ರಮದ ಬಗ್ಗೆಯು ತಿಳಿಸಿ ಅವಶ್ಯಕ ಸಂದರ್ಭದಲ್ಲಿ ಯಾವುದೇ ಕ್ಷಣದಲ್ಲಾದರೂ ಸಂಬಂಧಿಸಿದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಲು ತಿಳಿಸಿದರು.
ಈ ಎಲ್ಲಾ ಅಧಿಕಾರಿಗಳು ಸಕಾಲಕ್ಕೆ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ನೇರವಾಗಿ ದೂರವಾಣಿ ಮೂಲಕ ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಅಹಿಂದಾ ಮುಖಂಡರಾದ ಸೋಮನಾಥ ಕಳ್ಳಿಮನಿ ಇವರು ಮಾತನಾಡಿ, ಸರಕಾರದ ಸೌಲಬ್ಯಗಳು ಸಾಕಷ್ಟಿದ್ದರು ಸಹಿತ ಅದನ್ನು ತಿಳಿಸುವ ಮತ್ತು ತಿಳಿದುಕೊಳ್ಳುವ ಸರಿಯಾಗಿ ವ್ಯವಸ್ಥೆ ನಡೆಯುತ್ತಿಲ್ಲವಾದ್ದರಿಂದ ಜಿಲ್ಲಾ ಪಂಚಾಯತಿ ಅಧ್ಯಕ್ಷರಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿ ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದರು.