ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.27: ನಗರದ ಸುಣಗಾರ ಓಣಿಯಲ್ಲಿ ಇರುವ ಗಂಗಾಪರಮೇಶ್ವರಿ ದೇವಸ್ಥಾನದ ಕೌಂಪೌಂಡ್ ನಿರ್ಮಾಣ ಕಾಮಗಾರಿಗೆ ಶಾಸಕ ಪರಣ್ಣ ಮುನವಳ್ಳಿಯವರು ಭೂಮಿ ಪೂಜೆಯನ್ನು ಮಾಡುವ ಮೂಲಕ ಚಾಲನೆಯನ್ನು ನೀಡಿದರು.
ನಂತರ ಶಾಸಕ ಪರಣ್ಣ ಮುನವಳ್ಳಿಯವರು ಮಾತನಾಡಿ, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ದೇವಾಲಯ, ಮಂಟಪಗಳು ಅವಶ್ಯಕತೆ ತುಂಬಾ ಇದೆ. ಅದಕ್ಕಾಗಿಯೇ ನಮ್ಮ ಪುರಾತನ ಕಾಲದಿಂದಲೂ ರಾಜ ಮಹಾರಾಜರು ದೇವಾಲಯಗಳ ನಿರ್ಮಾಣಕ್ಕೆ ಹೆಚ್ಚು ಪ್ರಮುಖ್ಯತೆಯನ್ನು ನೀಡಿದ್ದಾರೆ. ಅವರ ಹಾಕಿಕೊಟ್ಟಿರುವ ದಾರಿಯಂತೆ ನಾವುಗಳು ಸಹ ಸಮಾಜದಲ್ಲಿ ದೇವಾಲಯಗಳನ್ನು, ಮಂಟಪಗಳನ್ನು ನಿರ್ಮಿಸಿಕೊಂಡು ಪ್ರತಿಯೊಬ್ಬರು ಅನ್ಯೋನ್ಯತೆಯಿಂದ ಬದುಕು ಸಾಗಿಸಬೇಕಾಗಿದೆ. ಸದ್ಯ ಗಂಗಾಪರಮೇಶ್ವರ ದೇವಸ್ಥಾನಕ್ಕೆ ಸುಮಾರು ವರ್ಷಗಳ ಹಿಂದೆ ನಿರ್ಮಿಸಿರುವ ಕಾಂಪೌಂಡ್ ಸಂಪೂರ್ಣ ದುರಸ್ತಿಯಾಗಿದೆ. ಅದನ್ನು ಪುನರ್ ನಿರ್ಮಾಣ ಮಾಡುವ ಉದ್ದೇಶದಿಂದ ಶಾಸಕರ ವೈಯಕ್ತಿಕ ನಿಧಿಯಿಂದ 1 ಲಕ್ಷ ರೂಗಳನ್ನು ನೀಡಲಾಗಿದ್ದು, ಆದಷ್ಟು ಬೇಗನೆ ಕಾಮಗಾರಿಯನ್ನು ಆರಂಭ ಮಾಡಿ, ಪೂರ್ಣಗೊಳಿಸಬೇಕು ಎಂದು ಹೇಳಿದರು. ನಂತರ ಗಂಗಾಮತ ಸಮಾಜದ ವತಿಯಿಂದ ಶಾಸಕ ಪರಣ್ಣ ಮುನವಳ್ಳಿಯವರಿಗೆ ಸನ್ಮಾನ ಮಾಡಿ, ಗೌರವಿಸಲಾಯಿತು.
ಈ ವೇಳೆ ಗಂಗಾಮತ ಸಮಾಜದ ಮುಖಂಡರಾದ ಬಿ.ನಾಗರಾಜ್, ತಾಲೂಕಾಧ್ಯಕ್ಷ ಈ.ಧನರಾಜ, ಮಲ್ಲಿಕಾರ್ಜುನ ಮುಕ್ಕುಂದಿ, ಕಾಶಿನಾಥ ಹೆಗಡೆಮುದ್ರಾ, ಹನುಮಂತಪ್ಪ ಮನಗೂಳಿ, ಹನುಮಂತಪ್ಪ ಮುಕ್ಕುಂದಿ, ಶಿವಕುಮಾರ ಅರಿಕೇರಿ, ನಗರಸಭೆ ಸದಸ್ಯ ಪರಶುರಾಮ ಮಡ್ಡೇರ, ಜಂಬಣ್ಣ, ಈರಣ್ಣ ಸೇರಿದಂತೆ ಅನೇಕರು ಇದ್ದರು.