ಕಾಂಪೌಂಡ್ ಜಿಗಿದು ಕಳ್ಳತನ‌ ಮಾಡುತ್ತಿದ್ದ ಕೊಲಂಬಿಯಾ ಗ್ಯಾಂಗ್ ಸೆರೆ

ಬೆಂಗಳೂರು, ಜು. ೩೦- ಖ್ಯಾತ ನಟ ಶಿವರಾಜ್‌ಕುಮಾರ್ ಪಕ್ಕದ ಮನೆಯ 15 ಅಡಿ ಎತ್ತರದ ಕಾಂಪೌಂಡ್ ಜಿಗಿದು ಕಳ್ಳತನ ಮಾಡಿದ್ದ ಕುಖ್ಯಾತ ಕೊಲಂಬಿಯಾ ಗ್ಯಾಂಗ್‌ನ್ನು ಬಂಧಿಸುವಲ್ಲಿ ಈಶಾನ್ಯ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಗ್ಯಾಂಗ್‌ನಿಂದ 2 ಕೋಟಿ 58 ಲಕ್ಷ ಮೌಲ್ಯದ 6 ಕೆಜಿ 140 ಗ್ರಾಂ ಚಿನ್ನಾಭರಣ, 4 ಲಕ್ಷ ಮೌಲ್ಯದ9 ಪಿಸ್ತೂಲ್‌ಗಳು, 23 ಜೀವಂತ ಗುಂಡುಗಳು, ಬೈಕ್, 3 ಪಾಸ್‌ಪೋರ್ಟ್‌ಗಳು, 1 ನಕಲಿ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳು ಎತ್ತರದ ಗೋಡೆಗಳನ್ನು ಸುಲಭವಾಗಿ ಜಿಗಿಯುವ ಪಾರ್ಕೂರ್ ತರಬೇತಿಯನ್ನು ಪಡೆದಿರುವುದು ತನಿಖೆಯಲ್ಲಿ ಕಂಡು ಬಂದಿದ್ದು, ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಕೊತ್ತನೂರು ಪೊಲೀಸರು ಸ್ಪ್ಯಾನಿಷ್ ಭಾಷೆಯನ್ನು ಕಲಿತಿದ್ದಾರೆ ಎಂದು ಹೇಳಿದರು.
ಕೊಲಂಬಿಯಾ ಗ್ಯಾಂಗ್‌ನ ಎಲಿಯೆನ್ ಪಡಿಲ್ಲಾ ಮಾರ್ಟನೇಟ್ (48), ಲೇಡಿ ಸ್ಟೆಪೆನಿಯಾ ಮನೋಜ್ ಮೋನ್‌ಸಾಲ್ವೆ (23),ಕ್ರಿಶ್ಚಿಯನ್ ಇನೀಸ್ ನವೋರೊ (34) ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬನಿಗಾಗಿ ಶೋಧ ನಡೆಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೃತ್ಯಕ್ಕೆ ಸಂಚಿನ ರೀತಿ
ಆರೋಪಿಗಳು ಕೊಲಂಬಿಯಾ ಮೂಲದವರಾಗಿದ್ದು, ಪ್ರವಾಸಿ ವೀಸಾದಡಿ ನೇಪಾಳ ಮಾರ್ಗವಾಗಿ ನವದೆಹಲಿಗೆ ಬಂದು ಅಲ್ಲಿ ಈಗಾಗಲೇ ಕೃತ್ಯಗಳನ್ನು ನಡೆಸಲು ಮಾಸ್ಟರ್‌ಮೈಂಡ್ ಆಗಿದ್ದ ಗುಸ್ತಾವೊ ಅಲಿಯಾಸ್ ಮುಸ್ತಫನ್ ನನ್ನನ್ನು ಸಂಪರ್ಕಿಸಿ ಬೆಂಗಳೂರು ನಗರವನ್ನು ಗುರಿಯಾಗಿಸಿಕೊಂಡು ಸರ್ವೀಸ್ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಾಗಿದ್ದರು.
ಕೊತ್ತನೂರು ಹಾಗೂ ನಗರದ ಪ್ರತಿಷ್ಠಿತ ಪ್ರದೇಶಗಳ ನಿರ್ಜನ ಪ್ರದೇಶಗಳನ್ನು ಸೈಕಲ್‌ನಲ್ಲಿ ಸುತ್ತಾಡುತ್ತ ಬೀಗ ಹಾಕಿದ ಮನೆಗಳನ್ನು ಹಾಗೂ ಮನೆ ಮುಂದೆ ಪೇಪರ್, ಹಾಲು ಬಿದ್ದಿರುವುದನ್ನು ಗುರುತಿಸಿ ಸಂಜೆ ನಂತರ ಮತ್ತೆ ಬೈಕ್‌ನಲ್ಲಿ ಬಂದು ಖಚಿತಪಡಿಸಿಕೊಂಡು ಕೃತ್ಯಕ್ಕಿಳಿಯುತ್ತಿದ್ದರು.
ಪಿಪಿಇ ಕಿಟ್-ಮಾಸ್ಕ್
ಆರೋಪಿಗಳು ಕೃತ್ಯನಡೆಸುವಾಗ ಬೆರಳಮುದ್ರೆ ಇನ್ನಿತರ ಗುರುತು ಸಿಗದಂತೆ ಕೊರೊನಾ ವಾರಿಯರ್ಸ್ ಧರಿಸುವ ಪಿಪಿಇ ಕಿಟ್, ದೇಹಪೂರ್ತಿ ಮುಚ್ಚುವ ಗೌನ್, ಗ್ಲೌಸ್, ಮಾಸ್ಕ್ ಧರಿಸಿ ಕಾಂಪೌಂಡ್ ಜಿಗಿದು ಒಳ ನುಗ್ಗುತ್ತಿದ್ದರು.
ಇದಕ್ಕೂ ಮೊದಲೇ ಕಮ್ಮ ಗ್ಯಾಂಗ್‌ನಲ್ಲಿದ್ದ ಮಹಿಳೆ ಕಿಂಬರ್ಲಿಯನ್ನು ಒಳಗೆ ಕಳುಹಿಸಿ ಯಾರು ಇಲ್ಲದಿದ್ದನ್ನು ಖಚಿತಪಡಿಸಿಕೊಳ್ಳುತ್ತಿದ್ದರು ನಂತರ ವಾಕಿಟಾಕಿ ಮೂಲಕ ಉಳಿದವರಿಗೆ ಮಾಹಿತಿ ನೀಡಿ ಶಬ್ಧ ಬರದಂತೆ ಬೀಗ ಒಡೆದು ಮನೆಗಳವು ಮಾಡುತ್ತಿದ್ದರು.
ಆರೋಪಿಗಳು ಕೃತ್ಯಕ್ಕೆ ಬಳಸುತ್ತಿದ್ದ ಸಾಧನಗಳು, ಹಿಂದೆ ಯಾವುದೇ ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಳ್ಳುವುದಕ್ಕಿಂತ ಭಿನ್ನವಾಗಿದ್ದು, ಅವುಗಳನ್ನು ಕಂಡು ಆಘಾತವುಂಟಾಗಿದೆ ಎಂದು ಹೇಳಿದರು.
ಮೊಬೈಲ್ ಜಾಮರ್, ಖಾರದಪುಡಿ, ಚಾಕು, ಮನೆ ಬಾಗಿಲುಗಳನ್ನು ಮುರಿಯಲು ಅವಶ್ಯಕವಾದ ಡ್ರಿಲ್ಲಿಂಗ್, ಲೇಸರ್ ಕಟ್ಟಿಂಗ್ ಮಿಷನ್, ಇನ್ನಿತರ ಅತ್ಯಾಧುನಿಕ ಟೂಲ್ ಸೆಟ್‌ನ್ನಿಟ್ಟುಕೊಂಡಿದ್ದರು.
ಪತ್ತೆ ಮಾಡಿದ ರೀತಿ
ಕಳೆದ ಅಕ್ಟೋಬರ್‌ನಲ್ಲಿ ಶಿವರಾಜ್‌ಕುಮಾರ್ ಅವರ ಪಕ್ಕದ ಮನೆಯಲ್ಲಿ ಕನ್ನಗಳವು ನಡೆದಿತ್ತು. ರಾತ್ರಿಗಸ್ತಿನಲ್ಲಿದ್ದ ಸಂಪಿಗೆ ಹಳ್ಳಿ ಪೊಲೀಸರು ವಿಷಯ ತಿಳಿದು ಸ್ಥಳಕ್ಕೆಧಾವಿಸಿದಾಗ ಆರೋಪಿಗಳು ತಾವು ತಂದಿದ್ದ ಕಾರನ್ನು ಬಿಟ್ಟು 15 ಅಡಿ ಎತ್ತರದ ಗೋಡೆಯನ್ನು ಜಿಗಿದು ಪರಾರಿಯಾಗಿದ್ದರು.
ಸ್ಥಳದಲ್ಲಿ ಮಾಹಿತಿ ಸಂಗ್ರಹಿಸಿ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ತರಸಿ ಎತ್ತರದ ಗೋಡೆ ಜಿಗಿಯಲು ತರಬೇತಿ ಪಡೆದಿದ್ದರೆ ಮಾತ್ರ ಸಾಧ್ಯವೆಂಬುದನ್ನು ಪತ್ತೆ ಹಚ್ಚಲಾಯಿತು. ಅದರಂತೆ 2018ರಲ್ಲಿ ಇದೇ ತರಹದ ಸಾಧನಗಳನ್ನು ಬಳಸಿ ಕಳವು ಮಾಡಿದ ಮಾಹಿತಿ ಕಲೆಹಾಕಿ ಹಳೆ ಆರೋಪಿಗಳ ಫೋಟೊಗಳನ್ನು ತರಿಸಿ ಅವುಗಳನ್ನು ತುಲನೆ ಮಾಡಿನೋಡಿದಾಗ ಮಾಸ್ಟರ್ ಮೈಂಡ್ ಗುಸ್ತಾವೊ ಪಾತ್ರವಿರುವುದು ಖಚಿತವಾಗುತ್ತದೆ.
ವಿಶೇಷ ತಂಡ ರಚನೆ
ಕಳವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈಶಾನ್ಯವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ಅವರು ವಿಶೇಷ ತಂಡವನ್ನು ರಚಿಸಿದ್ದು, 2 ತಿಂಗಳುಗಳ ಕಾಲ ತಂ‌ಡದ ಅಧಿಕಾರಿಗಳು ನಿರಂತರ ಶ್ರಮಿಸಿ ಥಣಿಸಂದ್ರದ ಪೆಟ್ರೋಲ್ ಬಂಕ್ ಬಳಿ ಅನುಮಾನಾಸ್ಪದ ವ್ಯಕ್ತಿಯೊಬ್ಬರನ್ನು ನಿಲ್ಲಿಸಿ ತಪಾಸಣೆನಡೆಸಿದಾಗ ಆರೋಪಿಯೊಬ್ಬ ಸಿಕ್ಕಿ ಬಿದ್ದಿದ್ದಾನೆ. ನಂತರ ಕಾರ್ಯಾಚರಣೆಯಲ್ಲಿ ಗ್ಯಾಂಗ್‌ನ್ನು ಬಂಧಿಸಲಾಗಿದೆ.
ಸ್ಪ್ಯಾನಿಷ್ ಕಲಿಕೆ
ಆರೋಪಿಗಳಿಗೆ ಸ್ಪ್ಯಾನಿಷ್ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲದಿದ್ದರಿಂದ ಮಾಹಿತಿ ಕಲೆ ಹಾಕಲು ಅಧಿಕಾರಿ ಹಾಗೂ ಸಿಬ್ಬಂದಿ ಹರಸಾಹಸ ಮಾಡಿ ಟ್ರಾನ್ಸ್‌ಲೇಟರ್‌ನ್ನು ಕರೆಸಿಕೊಂಡು ಗೂಗಲ್ ಮೂಲಕ ಮಾಹಿತಿ ಕಲೆಹಾಕಿ ಕೆಲವರು ಸ್ಪ್ಯಾನಿಷ್ ಕಲಿತು ಆರೋಪಿಗಳು ಕಳವು ಮಾಡಿದ್ದ 2 ಕೋಟಿ 58 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಲೇಡಿ ಸ್ಟೇಫೆನಿಯಾ ಅವಿವಾಹಿತಳಾಗಿದ್ದು, ಇತರ ಆರೋಪಿಗಳ ಜತೆ ಸೇರಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಅದರ ಮಾಹಿತಿಯನ್ನು ಪಡೆಯುವಲ್ಲಿ ಪರಿಣಿತಳಾಗಿದ್ದಳು.‌
ಮಾಸ್ಟರ್ ಮೈಂಡ್ ಗುಸ್ತಾವೊ 2018ರಲ್ಲಿ ಬಿಟಿಎಂ ಲೇಔಟ್‌ನ ನಿವೃತ್ತ ಮುಖ್ಯಕಾರ್ಯದರ್ಶಿ ಕೌಶಿಗ್ ಮುಖರ್ಜಿ ಸೇರಿದಂತೆ ಇತರ ಮನೆಗಳಲ್ಲಿ ಕಳವು ಮಾಡಿದ್ದ ಕುಖ್ಯಾತಿ ಹೊಂದಿದ್ದಾನೆ.
ಗುಸ್ತಾವೊ ಚಿನ್ನದ ಆಭರಣಗಳನ್ನು ಕರಗಿಸಿಕೊಳ್ಳುವಲ್ಲಿ ಪರಿಣಿತಿ ಹೊಂದಿದ್ದು, ಇತರ ಆರೋಪಿಗಳು ಕಳವು ಮಾಡುತ್ತಿದ್ದ ಆಭರಣಗಳನ್ನು ಕರಗಿಸಿ ಇಟ್ಟುಕೊಳ್ಳುವ ವಿಧಾನವನ್ನು ಯುಟೂಬ್ ಮೂಲಕ ಕಲಿತಿದ್ದರು.
ಬ್ಯಾಂಕ್ ಲೂಟಿಗೆ ಸಂಚು
ಆರೋಪಿಗಳು ಕಳೆದ ನವಂಬರ್‌ನಲ್ಲಿ ಯಲಹಂಕ ಉಪನಗರದ ಯುಕೊ ಬ್ಯಾಂಕ್‌ನಲ್ಲಿ ಕಳವು ಸಂಚು ರೂಪಿಸಿ ವಿಫಲರಾಗಿ ಪಕ್ಕದ ಮನೆಯೊಂದರಲ್ಲಿ ಕಳವು ಮಾಡಿದ್ದರು.
ಜೀವನಶೈಲಿ ಹಾಗೂ ಚಟ
ಆರೋಪಿಗಳು ನುಗ್ಗುತ್ತಿದ್ದ ಮನೆಯಲ್ಲಿ ಚಿನ್ನ ಹಾಗೂ ನಗದು ಮಾತ್ರ ಕಳವು ಮಾಡುತ್ತಿದ್ದು, ಮೊಬೈಲ್, ಲ್ಯಾಪ್‌ಟಾಪ್ ಇನ್ನಿತರ ತಂತ್ರಜ್ಞಾನದ ಸಂಬಂಧಿತ ವಸ್ತುಗಳನ್ನು ಕಳವು ಮಾಡುತ್ತಿರಲಿಲ್ಲ.ಚಿನ್ನವನ್ನು ಕರಗಿಸಿ ತಮ್ಮಲ್ಲಿಯೇ ಇಟ್ಟುಕೊಂಡರೆ, ಹಣವನ್ನು ಐಷಾರಾಮಿ ಜೀವನ ಹಾಗೂ ದುಶ್ಚಟಗಳಿಗೆ ವಿನಿಯೋಗಿಸುತ್ತಿದ್ದರು.
31 ಪ್ರಕರಣ ಪತ್ತೆ
ಆರೋಪಿಗಳ ಬಂಧನದಿಂದ ಸಂಪಿಗೆಹಳ್ಳಿ, .ಕೊತ್ತನೂರು, ಅಮೃತಹಳ್ಳಿ, ಚಿಕ್ಕಜಾಲ, ಯಲಹಂಕ, ಯಲಹಂಕ ಉಪನಗರ, ಕೊಡಿಗೇಹಳ್ಳಿ, ಆನೇಕಲ್ ಸೇರಿದಂತೆ 31ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.
ಮಾಸ್ಟರ್ ಮೈಂಡ್ ಗುಸ್ತಾವೊ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಅವರು ತಿಳಿಸಿದರು. ಕೊಲಂಬಿಯಾ ಗ್ಯಾಂಗ್‌ನ್ನು ಬಂಧಿಸಿದ ಈಶಾನ್ಯ ಪೊಲೀಸರ ವಿಶೇಷ ತಂಡಕ್ಕೆ ನಗದು ಬಹುಮಾವ ಘೋಷಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ಅವರಿದ್ದರು.