ಕಾಂತಾರ ಶೀಘ್ರ ಒಟಿಟಿಗೆ

ಬೆಂಗಳೂರು, ನ. ೧೮- ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರ ಸಿನಿಮಾ ಕಾಂತಾರ ಯಾವಾಗ ಒಟಿಟಿಯಲ್ಲಿ ಬರುತ್ತೆ ಎಂದು ಪ್ರೇಕ್ಷಕರು ಭಾರಿ ಕೂತುಹಲದಿಂದ ಕಾಯುತ್ತಿದ್ದಾರೆ.
ಈಗಾಗಲೇ ಚಿತ್ರಮಂದಿರಲ್ಲಿ ಎರಡೆರಡು ಬಾರಿ ಚಿತ್ರ ವೀಕ್ಷಿಸಿದ್ದರೂ ಮತ್ತೆ ಒಟಿಟಿಯಲ್ಲಿ ಚಿತ್ರ ನೋಡಬೇಕೆಂಬುದು ಪ್ರೇಕ್ಷಕರ ಒತ್ತಾಸೆಯಾಗಿದೆ. ಕಾಂತಾರ ಚಿತ್ರ ಅಂತಹ ಕ್ರೇಜ್ ನ್ನು ಹುಟ್ಟುಹಾಕಿದೆ ಎಂದರೆ ತಪ್ಪಾಗಲಾರದು.
ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರ ಒಟಿಟಿ ಫ್ಲಾಟ್‌ಫಾರಂನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
ಚಿತ್ರವು ನವೆಂಬರ್ ೨೪, ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರೀಮಿಯರ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾಂತಾರ ಚಿತ್ರವು ೨೦೨೨ ರ ಅತಿದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರವನ್ನು ೧೪ರಿಂದ ೧೬ ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಚಿತ್ರ ಗಳಿಸಿದ ಹಣ ಒಟ್ಟು ೪೦೦ ಕೋಟಿಗೂ ಹೆಚ್ಚು.
ಚಿತ್ರವು ಅಲ್ಲು ಅರ್ಜುನ್ ಅವರ ಪುಷ್ಪ ದಿ ರೈಸ್, ಯಶ್ ಅವರ ಕೆಜಿಎಫ್ ೨ ಮತ್ತು ಇತರ ಬ್ಲಾಕ್ ಬಸ್ಟರ್ ಹಿಟ್‌ಗಳ ದಾಖಲೆಗಳನ್ನು ಸಹ ಮುರಿದಿದೆ. ಈಗ ಎಲ್ಲರ ಪ್ರಶ್ನೆ ಒಟಿಟಿ ರಿಲೀಸ್ ಬಗ್ಗೆ ಮಾತ್ರ. ಸಿನಿಮಾ ನವೆಂಬರ್ ಆರಂಭದಲ್ಲಿಯೇ ಒಟಿಟಿಯಲ್ಲಿ ರಿಲೀಸ್ ಆಗುವುದರಲ್ಲಿತ್ತು. ಆದರೆ ಸಿನಿಮಾದ ದೊಡ್ಡಮಟ್ಟಿನ ಯಶಸ್ಸು ಎಲ್ಲವನ್ನೂ ಬದಲಾಯಿಸಿತು.
ಚಿತ್ರದ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದೆ. ಕಾಂತಾರ ಇದೇ ತಿಂಗಳು ಪ್ಲಾಟ್ ಫಾರ್ಮ್ ನಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸುವ ಸಾಧ್ಯತೆಯಿದೆ. ಆದರೆ ಒಂದು ಷರತ್ತು ಇದೆ. ನೀವು ಅಮೆಜಾನ್ ಪ್ರೈಮ್ ಸಬ್ ಸ್ಕ್ರೈಬ್ ಮಾಡಿದ್ದರೂ ಸಹ ನೀವು ಅದನ್ನು ಉಚಿತವಾಗಿ ವೀಕ್ಷಿಸಲು ಸಾಧ್ಯವಿಲ್ಲ. ಸ್ವಲ್ಪ ಹಣವನ್ನು ಪಾವತಿಸಿ ನೀವು ಸಿನಿಮಾ ಬಾಡಿಗೆಗೆ ಪಡೆಯಬೇಕಾಗುತ್ತದೆ. ಆದರೆ, ನಿರ್ಮಾಪಕರಿಂದ ಅಧಿಕೃತ ಪ್ರಕಟಣೆಯನ್ನು ನಿರೀಕ್ಷಿಸಲಾಗುತ್ತಿದೆ.
ನವೆಂಬರ್ ೨೪ ಅನ್ನು ನಿಗದಿಪಡಿಸುವ ಮೊದಲು ತಯಾರಕರು ಒಟಿಟಿ ಬಿಡುಗಡೆ ದಿನಾಂಕವನ್ನು ಹಲವಾರು ಬಾರಿ ಬದಲಾಯಿಸಿದ್ದಾರೆ ಎನ್ನಲಾಗಿದೆ. ಕನ್ನಡದ ಕಾಂತಾರ ಕರ್ನಾಟಕದಲ್ಲಿ ೫೦ ದಿನ ಪೂರ್ಣಗೊಳಿಸಿದ್ದು ಸಿನಿಮಾದ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಎಲ್ಲೆಡೆ ಸಿನಿಮಾ ಸಖತ್ ಕ್ರೇಜ್ ಸೃಷ್ಟಿ ಮಾಡಿದೆ.