ಕಾಂತಾರ ತೆರೆ ಹಿಂದಿನ ಕತೆ ಬಿಚ್ಚಿಟ್ಟ ಪ್ರಮೋದ್

ಬೆಂಗಳೂರು, ಜ. ೧೩- ಕನ್ನಡದ ಸೂಪರ್ ಹಿಟ್ ಚಿತ್ರ ಕಾಂತಾರ ಬಗ್ಗೆ ಕೆಲ ಆಸಕ್ತಿದಾಯಕ ಮಾಹಿತಿಯನ್ನು ನಟ ಪ್ರಮೋದ್ ಶೆಟ್ಟಿ ಹಂಚಿಕೊಂಡಿದ್ದಾರೆ. ಚಿತ್ರ ಬಿಡುಗಡೆಯಾದ ಮೇಲೆ ಚಂದನವನ ಸೇರಿದಂತೆ ಟಾಲಿವುಡ್, ಕಾಲಿವುಡ್ ಬಾಲಿವುಡ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. ವಿಶ್ವವೇ ಕೊಂಡಾಡಿದ್ದ ಕಾಂತಾರ ಚಿತ್ರ ಲಾಕ್‌ಡೌನ್ ಟೈಂನಲ್ಲಿ ಹುಟ್ಟಿಕೊಂಡ ಕಥೆ ಎಂದು ಅವರು ಬಿಚ್ಚಿಟ್ಟಿದ್ದಾರೆ.
ಕಾಂತಾರ ಕನ್ನಡಿಗರು ಮಾತ್ರ ಅಲ್ಲ, ಬೇರೆ ಬೇರೆ ಭಾಷೆಯಲ್ಲೂ ಮೋಡಿ ಮಾಡಿತ್ತು. ಕಾಂತಾರ ನೋಡಿ ಮೆಚ್ಚದವರಿಲ್ಲ. ಎಲ್ಲರೂ ರಿಷಬ್ ಶೆಟ್ಟಿ ಅದ್ಭುತ ನಟನೆ ಹಾಡಿ ಹೊಗಳಿದ್ದರು. ಆ ಸಿನಿಮಾ ಸಂಕ್ರಾಂತಿ ಹಬ್ಬದಂದು ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಪ್ರಮೋದ್ ಶೆಟ್ಟಿ ಚಿತ್ರದ ಬಗ್ಗೆ ಮಾತಾನಾಡಿ ಕಾಂತಾರ ಸಿನಿಮಾ ನಮ್ಮ ಊಹೆಗೂ ಮೀರಿದ ಸಿನಿಮಾ. ಸಂಸ್ಕೃತಿಗೆ ಶ್ರೀಮಂತವಾಗಿರುವ ಸಿನಿಮಾ. ನಮ್ಮ ನೆಟಿವಿಟಿನಾ ಪ್ರಪಂಚಕ್ಕೆ ಹರಡಿದ ಸಿನಿಮಾ ಎಂದು ಹೇಳಿದ್ದಾರೆ.
ಈ ಸಿನಿಮಾ ಶುರುವಾಗಿದ್ದು ಲಾಕ್‌ಡೌನ್ ಟೈಂನಲ್ಲಿ ರಿಷಬ್ ಮನೆಯಲ್ಲಿ ಕೂತಾಗ. ನಾವು ದಿನ ಕಾಲ್ ಮಾಡಿ ಮಾತನಾಡ್ತಾ ಇದ್ವಿ. ಈ ರೀತಿ ಒಂದು ಲೈನ್ ಬಂದಿದೆ. ಹೇಗಿದೆ ಹೇಳಿ ಶೆಟ್ರೆ ಅಂದ್ರು. ನನಗೆ ಮಾತ್ರ ಅಲ್ಲ, ಅವರು ಎಲ್ಲರಿಗೂ ಕಾಲ್ ಮಾಡ್ತಾರೆ ಎಂದು ಪ್ರಮೋದ್ ಶೆಟ್ಟಿ ಹೇಳಿದ್ದಾರೆ.
ದಿನ ಕಾಲ್ ಮಾಡ್ತಾ ಮಾಡ್ತಾ, ಮೊದಲ ದಿನ ೨ ನಿಮಿಷದ ಕಥೆ ಹೇಳಿದ. ಮಾರನೆ ದಿನ ೫ ನಿಮಿಷಕ್ಕೆ ಬಂತು. ಅದರ ಮಾರನೆ ದಿನ ಕಾಲ್ ಗಂಟೆ ಬಂತು. ಅದರ ಮಾರನೆ ದಿನ ಅರ್ಧಗಂಟೆ ಬಂತು ಎಂದು ಪ್ರಮೋದ್ ತೆರೆ ಹಿಂದಿನ ಕಥೆ ಹೇಳಿದ್ದಾರೆ. ಆ ಕಥೆ ಅಷ್ಟು ಚೆನ್ನಾಗಿ ಡೆವಲಪ್ ಆಗ್ತಾ ಇತ್ತು. ಅವನು ಊರಲ್ಲಿ ಕೂತು ಬರೆದಿದ್ದರಿಂದ, ಅದನ್ನು ಸ್ಕ್ರೀನ್ ಮೇಲೆ ತರಲು ಹೆಲ್ಪ್ ಆಯ್ತು. ಅವನ ರೈಟಿಂಗ್ ಟೀಂ ಸಹ ಅದ್ಭುತವಾಗಿ ಕೆಲಸ ಮಾಡಿದೆ ಎಂದು ಪ್ರಮೋದ್ ಶೆಟ್ಟಿ ಹೇಳಿದ್ದಾರೆ.