ಕಾಂತಾರ ಚಿತ್ರಕ್ಕೆ ವಿಶೇಷ ತೀರ್ಪುಗಾರರ ಪ್ರಶಸ್ತಿ

ಗೋವಾ,ನ.೨೮-ಹೊಂಬಾಳೆ ಫಿಲಂಸ್ ನಿರ್ಮಾಣ, ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರಕ್ಕೆ ಮತ್ತೊಂದು ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಕಾಂತಾರ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಸಿಲ್ವರ್ ಪೀಕಾಕ್ ಸ್ಪೆಷಲ್ ಜ್ಯೂರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಾಂತಾರ ಸಿನಿಮಾದ ಪೂರ್ವ ಭಾಗವಾಗಿರುವ ಕಾಂತಾರ ಒಂದು ದಂತಕಥೆ ಅಧ್ಯಾಯ-೧ ದ ಫಸ್ಟ್ ಲುಕ್ ಮತ್ತು ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಇದೇ ಸಂದರ್ಭದಲ್ಲಿ ಕಾಂತಾರಕ್ಕೆ ಮತ್ತೊಂದು ಗೌರವ ಸಿಕ್ಕಿದೆ.
ಗೋವಾದಲ್ಲಿ ಮುಕ್ತಾಯಗೊಂಡ ೫೪ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಂತಾರ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ವಿಶೇಷ ಪ್ರಶಸ್ತಿಯು ಪ್ರಮಾಣ ಪತ್ರ, ಬೆಳ್ಳಿ ನವಿಲು ಹಾಗೂ ೧೫ ಲಕ್ಷ ರೂ. ಬಹುಮಾನ ನಗದು ಒಳಗೊಂಡಿದೆ.ಕನ್ನಡ ಚಿತ್ರವೊಂದು ಇಂತಹ ಪ್ರಶಸ್ತಿ ಪಡೆದಿರುವುದು ಇದೇ ಮೊದಲು.
ಪ್ರತಿಷ್ಠಿತ ಪ್ರಶಸ್ತಿಗಾಗಿ ೧೨ ಅಂತರರಾಷ್ಟ್ರೀಯ ಮತ್ತು ೩ ಭಾರತೀಯ ಚಲನಚಿತ್ರಗಳನ್ನು ಒಳಗೊಂಡ ಒಟ್ಟು ೧೫ ಚಿತ್ರಗಳು ಸ್ಪರ್ಧಿಸಿದ್ದವು. ಪ್ರಶಸ್ತಿ ಸಿಕ್ಕ ಬಗ್ಗೆ ಹೊಂಬಾಳೆ ಸಂಸ್ಥೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಕಾಂತಾರ ಸಿನಿಮಾ ಹೊಸ ಇತಿಹಾಸ ನಿರ್ಮಿಸಿದೆ ಎಂದಿದೆ. ರಿಷಬ್ ಶೆಟ್ಟಿ ಕೂಡ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.
ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ, ಮಾತನಾಡಿ ಕಳೆದ ವರ್ಷ, ನಾವು ಚಿತ್ರದ ಪ್ರಚಾರಕ್ಕಾಗಿ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬಂದಿದ್ದೆವು ಈ ಬಾರಿ ನಮ್ಮ ಚಿತ್ರವು ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಗೆದ್ದಿದೆ ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ, ಎಂದು ಸಂತೋಷ್ ಹಂಚಿಕೊಂಡಿದ್ದಾರೆ.
ಕಳೆದ ವರ್ಷ ತೆರೆಕಂಡ ಕಾಂತಾರ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಕನ್ನಡದಲ್ಲಿ ಯಶಸ್ವಿಯಾದ ಸಿನಿಮಾ ನಂತರ ಬೇರೆ ಭಾಷೆಗಳಿಗೂ ಡಬ್ ಆಗಿತ್ತು. ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಚಿತ್ರ ೩೦೦ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.
ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದವರು ನಟಿಸಿದ್ದಾರೆ, ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಮತ್ತು ಛಾಯಾಗ್ರಹಣವಿದೆ.
ಪ್ರಶಸ್ತಿ ಸಮಾರಂಭದಲ್ಲಿ ಪಂಚೆ ಹಾಗೂ ಕಪ್ಪು ಅಂಗಿ ತೊಟ್ಟು ರಿಷಬ್ ಕಾಣಿಸಿಕೊಂಡಿದ್ದಾರೆ.
೧೯೭೮ರಲ್ಲಿ ಒಂದಾನೊಂದು ಕಾಲದಲ್ಲಿ ಚಿತ್ರದ ನಟನೆಗಾಗಿ ನಟ, ನಿರ್ದೇಶಕ ಶಂಕರ್‌ನಾಗ್ ಅತ್ಯುತ್ತಮ ನಟ ಸಿಲ್ವರ್ ಪೀಕಾಕ್ ಪ್ರಶಸ್ತಿ ಪಡೆದಿದ್ದಾರೆ. ಅದು ೭ನೇ ಗೋವಾ ಅಂತರಾಷ್ಟ್ರೀಯ ಚಿತ್ರೋತ್ಸವ ಆಗಿತ್ತು. ಬಳಿಕ ಈಗ ರಿಷಬ್ ಶೆಟ್ಟಿ ಆ ಸಾಧನೆ ಮಾಡಿದ್ದಾರೆ.