ಕಾಂತರಾಜು ವರದಿ ಜಾರಿಗೆನಂಜುಂಡಿ ಆಗ್ರಹ

ಬೆಂಗಳೂರು, ನ.೨೯-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ವ್ಯಕ್ತಪಡಿಸುವ ಬಗ್ಗೆ ಹೆಚ್ಚು ಗಮನ ನೀಡದೇ ಎಚ್.ಕಾಂತರಾಜು ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಜಾತಿವಾರು ಸಮೀಕ್ಷೆಯ ವರದಿಯನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷರೂ ಆದ ಬಿಜೆಪಿ ಮುಖಂಡ ಕೆ.ಪಿ.ನಂಜುಂಡಿ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೧೬೭ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಕಾಂತರಾಜು ಅವರ ನಿಯೋಗದೊಂದಿಗೆ ಕರ್ನಾಟಕ ರಾಜ್ಯದ ಜಾತಿವಾರು ಜನಗಣತಿಯನ್ನು ನಡೆಸಿದ್ದರು. ನಂತರ ಬಂದ ಸರ್ಕಾರ ಈ ಆಯೋಗದ ವರದಿಯನ್ನು ಕಾರಣಾಂತರಗಳಿಂದ ಸ್ವೀಕರಿಸಲಿಲ್ಲ. ಈಗ ಮತ್ತೆ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಿದ್ದು, ಈ ಕೂಡಲೇ ವರದಿ ಬಹಿರಂಗ ಮಾಡಲಿ ಎಂದು ಮನವಿ ಮಾಡಿದರು.
ಮತ್ತೊಂದೆಡೆ ಕೆಲವರು ವರದಿಯ ವಿರುದ್ಧ ಮಾತುಗಳನ್ನಾಡಿದ್ದಾರೆ. ಆದರೆ, ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇರುವುದರಿಂದ ಅದರ ಬಗ್ಗೆ ನಾವು ಯಾವುದೇ ರೀತಿಯ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದ ಅವರು, ರಾಜ್ಯದ ಹಿಂದುಳಿದ ವರ್ಗದಲ್ಲಿರುವ ೧೯೭ ಜಾತಿಗಳಿಗೆ ಸಂಬಂಧಿಸಿದಂತೆ ಶೇ.೯೯ರಷ್ಟು ಯಾವುದೇ ಕಾಯಕ ಸಮಾಜಗಳ ಜನಸಂಖ್ಯೆ ನಿಖರವಾಗಿ ಸರ್ಕಾರಗಳ ಅಧಿಕೃತ ದಾಖಲೆಗಳಲ್ಲಿ ಇಲ್ಲ.
ಕಾಯಕ ಸಮಾಜದಲ್ಲಿರುವ ಎಲ್ಲಾ ಜಾತಿಗಳು ತಮ್ಮ ಕುಲಕಸುಬುಗಳನ್ನು ನಂಬಿ ಜೀವನ ನಡೆಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ತಂತ್ರಜ್ಞಾನ ಹಾಗೂ ಬಂಡವಾಳಶಾಹಿಗಳ ಭರಾಟೆಯಲ್ಲಿ ಮೂಲ ಕಸುಬುಗಳು ಇಂದು ಉಳಿಸಿಕೊಳ್ಳಲಾಗದೇ ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವುದು ಎಲ್ಲ ಕಾಯಕ ಸಮಾಜಗಳಿಗೂ, ರಾಜ್ಯದ ಜನತೆಗೂ ತಿಳಿದ ವಿಚಾರ. ಆದರೆ ಸಂವಿಧಾನದ ಪ್ರಕಾರ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಬೇಕಾದರೆ ಆಯಾ ಸಮಾಜಗಳ ಜನಸಂಖ್ಯೆ ಆಯಾ ಸಮಾಜಗಳಿಗೆ ತಿಳಿಯುವುದು ಮುಖ್ಯ ಹಕ್ಕಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಜತೆಗೆ, ಎಲ್ಲಾ ಸಮಾಜಗಳ ಜನಸಂಖ್ಯೆಯ ವಿವರಗಳು ಸರ್ಕಾರ ತಿಳಿದುಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ. ತಿಳಿದುಕೊಳ್ಳದೇ ಹೀಗೇ ಮುಂದುವರೆದರೆ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗುತ್ತದೆ.
ಇದನ್ನು ಮನಗಂಡು ರಾಜ್ಯ ಸರ್ಕಾರ ಜಾತಿವಾರು ಜನಗಣತಿಯನ್ನು ಕಾಂತರಾಜು ಅವರ ನೇತೃತ್ವದಲ್ಲಿ ಸಮೀಕ್ಷೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸುವ ಬಗ್ಗೆ ಹೆಚ್ಚು ಗಮನ ನೀಡದೇ ಮೊದಲು ವರದಿಯನ್ನು ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದರು.