ಕಾಂಗ್ರೇಸ್ ಸರ್ಕಾರ ಮತಾಂತರ ಮತ್ತೆ ಮುನ್ನೆಲೆಗೆ ತರುತ್ತಿದೆ

ಸಂಜೆವಾಣಿ ವಾರ್ತೆ

ಚಿತ್ರದುರ್ಗ,ಜು.07: ಕಾಂಗ್ರೆಸ್ ಸರ್ಕಾರ ಮೋಸ, ಆಮಿಷದ ಮತಾಂತರ ಸರಿ ಎನ್ನುತ್ತದೆಯೇ ಎಂಬ ಬಗ್ಗೆ ಉತ್ತರ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಗ್ರಹಿಸಿದ್ದಾರೆ.ಅವರು ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತ, ಮತಾಂತರ ಪಿಡುಗು ಹಿಂದೂ ಸಮಾಜಕ್ಕೆ ಗೆದ್ದಲು ಹುಳುವಿನ ರೀತಿಯಾಗಿದ್ದು, ಬಲವಂತದ ಮತಾಂತರವನ್ನು ಬಿಜೆಪಿ ಸರ್ಕಾರ ನಿಷೇಧಿಸಿತ್ತು. ಆದರೆ ಕಾಂಗ್ರೇಸ್ ಸರ್ಕಾರ ಮತಾಂತರವನ್ನು ಮತ್ತೆ ಮುನ್ನೆಲೆಗೆ ತರುತ್ತಿದೆ. ಎಲ್ಲಾ ಜನ ಮತಾಂತರ ಆದರೆ ಮಠಕ್ಕೆ ಹೋಗುವವರು ಯಾರು? ಎಂದು ಪ್ರಶ್ನಿಸಿದ ಅವರು, ಎಲ್ಲಾ ಸಮುದಾಯದ ಮುಖಂಡರು, ಮಠಾಧೀಶರು ಈ ಕುರಿತು ಚರ್ಚಿಸಬೇಕು. ಮಹಾ ಪಂಚಾಯತಿಯನ್ನೇ ಕರೆದು ಚರ್ಚಿಸಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ರಾಜ್ಯ ಕಾಂಗ್ರೆಸ್ ಸರ್ಕಾರ ಆರಂಭದಿಂದಲೇ ಗೊಂದಲದಲ್ಲಿದೆ. ಚುನಾವಣೆಗೂ ಮುನ್ನ ಗ್ಯಾರಂಟಿ ಯೋಜನೆ ಎಲ್ಲರಿಗೂ ಫ್ರೀ ಎಂದಿದ್ದರು. ಈಗ ಗ್ಯಾರಂಟಿ ಯೋಜನೆಗೆ ಕಂಡಿಷನ್ ಹಾಕ‌ ತೊಡಗಿದ್ದಾರೆ. ಈ ರೀತಿಯ ಸುಳ್ಳು ಹೇಳಿಕೆಗಳನ್ನು ನೀಡಿ ಜನರನ್ನು ದಾರಿ ತಪ್ಪಸಿ ಚುನಾವಣೆಯನ್ನು ಗೆದ್ದಿದ್ದಾರೆ.ಕಾಂಗ್ರೇಸ್ ಸರ್ಕಾರ ವಿದ್ಯುತ್ ದರ ಏರಿಸುವುದರ ಜೊತೆಗೆ ಬೆಲೆ ಏರಿಕೆ ಬರೆ ಹಾಕಿ ಜನ ವಿರೋಧಿ ನೀತಿ ಅನುಸರಿಸಿ ಇದೀಗ ಜನರ ಗಮನ ಡೈವರ್ಟ್ ಮಾಡಲು ಬೇರೆ ವಿಚಾರಗಳ ಮೊರೆ ಹೋಗಿದೆ ಎಂದು ಆರೋಪಿಸಿದರು.ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ  ಆಧಾರವಿಟ್ಟುಕೊಂಡು ಮಾತಾಡುತ್ತಿದ್ದಾರೆ. ಇದರಿಂದಾಗಿ ನಾವು ಅವರನ್ನು ಬೆಂಬಲಿಸಿದ್ದೇವೆ. ಆಧಾರ ಏನೆಂಬುದು ಹೆಚ್.ಡಿ.ಕುಮಾರಸ್ವಾಮಿ ಬಹಿರಂಗ ಪಡಿಸಬೇಕು ಎಂದರು.ಬಿಜೆಪಿ ರಾಜ್ಯದ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ ರಂದು ಹೇಳಿದ ಸಿ.ಟಿ ರವಿ, ವಿಪಕ್ಷ ನಾಯಕನ ಆಯ್ಕೆ ವಿಳಂಬ ಬಗ್ಗೆ ಕುರಿತು ಪ್ರತಿಕ್ರಿಯೆ ನೀಡುತ್ತ, ಕೆಲವು ಸಂಗತಿಗಳನ್ನು ನಾನು ಹೇಳಲು ಆಗುವುದಿಲ್ಲ. ನನ್ನ ಬಳಿಯೂ ಈ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಬಹಳ ಹುಡುಕಬೇಕಾದ ಸ್ಥಿತಿಯೂ ಇಲ್ಲ. ಇಬ್ಬರು ವೀಕ್ಷಕರು ಈಗಾಗಲೇ ಬಂದು ವರದಿ ತೆಗೆದುಕೊಂಡು ಹೋಗಿದ್ದಾರೆ. ಹೈ ಕಮಾಂಡ್ ಗೆ ಬಹುಶಃ ಬೇರೆನಾದರು ಯೋಚನೆ ಇರಬಹುದೆನೋ ಎಂದು ಹೇಳುತ್ತಾ, ವಿಪಕ್ಷ ನಾಯಕ ಸ್ಥಾನಕ್ಕೆ ಹೊಸಮುಖ ತರುವ ಕುರಿತು ಸುಳಿವು ನೀಡಿದರು.