ಕಾಂಗ್ರೇಸ್ ಸರ್ಕಾರ ಐದು ವರ್ಷ ಸಂಪೂರ್ಣಗೊಳಿಸಲಿದೆ-ಕೋಡಿಮಠದ ಶ್ರೀಗಳ ಭವಿಷ್ಯ

ಮಂಡ್ಯ : ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೇಸ್ ಸರ್ಕಾರವು ಜನತೆಯ ಭವನೆಗಳಿಗೆ ಪೂರಕವಾಗಿ ಸ್ಪಂದಿಸಿ ಕೆಲಸ ಮಾಡುವ ಮೂಲಕ ಜನಾದೇಶದ ತೀರ್ಪಿಗೆ ಅನುಗುಣವಾಗಿ ಐದು ವರ್ಷಗಳನ್ನು ಸಂಪೂರ್ಣಗೊಳಿಸಲಿದೆ ಎಂದು ಅರಸೀಕೆರೆಯ ಹಾರನಹಳ್ಳಿ ಕೋಡಿಮಠದ ಪೀಠಾಧಿಪತಿಗಳಾದ ಡಾ.ಶ್ರೀ ಸದಾಶಿವ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು ಭವಿಷ್ಯ ನುಡಿದರು.
ಡಿಕೆಶಿಗೂ ಮುಖ್ಯಮಂತ್ರಿ ಯೋಗ :
ಕೆ.ಆರ್. ಪೇಟೆ ಪಟ್ಟಣದಲ್ಲಿ ನಡೆದ ಖಾಸಗಿ ಕಾರ‌್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಪಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೇಸ್ ಬಹುಮತ ಪಡೆಯಲು ಡಿಕೆಶಿ ಕೊಡುಗೆಯೂ ಇದೆ. ಮಂತ್ರಿ ಮಂಡಲ ವಿಸ್ತರಣೆಯಲ್ಲಿ ಗುಂಪುಗಾರಿಕೆಗೆ ಅವಕಾಶ ಮಾಡಿಕೊಡದೇ ಪ್ರಾದೇಶಿಕವಾರು ಜಿಲ್ಲಾವಾರು ಸೂಕ್ತ ಪ್ರಾತಿನಿಧ್ಯ ನೀಡಿ ಸಂಪುಟ ವಿಸ್ತರಣೆ ಮಾಡಬೇಕು ಎಂದು ಸಲಹೆ ನೀಡಿದರು.
ಸಿಎಂ ಆಗ್ತೀರಿ ಎಂದು ಸಿದ್ದರಾಮಯ್ಯಗೆ ಹೇಳಿದ್ದೆ :
ಅರಸೀಕರೆಗೆ ಪ್ರಚಾರಕ್ಕೆ ಆಗಮಿಸಿದ್ದ ಸಿದ್ಧರಾಮಯ್ಯ ಅವರಿಗೆ ನಿಮಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ಹೇಳಿದ್ದೆ. ಅದು ನಿಜವಾಗಿದೆಯಲ್ಲದೇ ಕಾಂಗ್ರೇಸ್ ದೊಡ್ಡ ಪಕ್ಷವಾಗಿ ಯಾರದೇ ಹಂಗಿಲ್ಲದೇ ಸ್ವತಂತ್ರವಾಗಿ ಅಧಿಕಾರ ಹಿಡಿಯಲಿದೆ ಎಂದು ನುಡಿದಿದ್ದೆ ಎಂದು ತಿಳಿಸಿದರು.
ಲೋಕಸಭೆ ಚುನಾವಣೆ ನಂತರ ಕಂಟಕ :
ಸಧ್ಯಕ್ಕೆ ರಾಜ್ಯ ಸರ್ಕಾರಕ್ಕೆ ಯಾವುದೇ ಕಂಟಕವಿಲ್ಲ. ಲೋಕಸಭಾ ಚುನಾವಣೆಯ ನಂತರ ಸಣ್ಣ ಕಂಟಕ ಉಂಟಾಗಲಿದೆ ಅದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಪತ್ರಕರ್ತರಿಗೆ ಕೋಡಿಶ್ರೀಗಳು ಮಾರ್ಮಿಕವಾಗಿ ನುಡಿದರು.