ಕಾಂಗ್ರೇಸ್ ಶಾಸಕರ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಹುಮತ

ಕೋಲಾರ, ಜೂ. ೫- ಪರಾಭವಗೊಂಡ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್‌ಗೆ ಕಾಂಗ್ರೆಸ್ ಶಾಸಕರಿರುವ ಕೆಜಿಎಫ್ ಕ್ಷೇತ್ರ ಹೊರತುಪಡಿಸಿ ಬಂಗಾರಪೇಟೆ, ಮಾಲೂರು, ಕೋಲಾರ, ಚಿಂತಾಮಣಿ ಕ್ಷೇತ್ರದಲ್ಲಿ ಕಡಿಮೆ ಮತಗಳು ಬಂದಿವೆ.
ಕೆಜಿಎಫ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ೩೪,೪೩೧ ಮತಗಳ ಮುನ್ನಡೆ ಹಾಗೂ ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಇಲ್ಲದಿದ್ದರೂ ೪೧೧ ಮತಗಳ ಮುನ್ನಡೆ ಹೊರತುಪಡಿಸಿದರೆ ಕಾಂಗ್ರೆಸ್ ಶಾಸಕರಿರುವ ಬಂಗಾರಪೇಟೆಯಲ್ಲಿ ೨೮,೧೩೪, ಕೋಲಾರದಲ್ಲಿ ೮,೯೪೦ ಹಾಗೂ ಮಾಲೂರಿನಲ್ಲಿ ೧೩,೩೦೦ ಮತಗಳು ಜೆಡಿಎಸ್‌ಗೆ ಮುನ್ನಡೆಯಾಗಿದೆ.
ಸಚಿವರು ಇರುವ ಚಿಂತಾಮಣಿಯಲ್ಲಿ ಜೆಡಿಎಸ್‌ಗೆ ೭೨೫೦ ಮತಗಳು ಮುನ್ನಡೆಯಾಗಿವೆ, ಉಳಿದಂತೆ ಶ್ರೀನಿವಾಸಪುರದಲ್ಲಿ ೯೪೯೨, ಮುಳಬಾಗಿಲಿನಲ್ಲಿ ೩೨೫೨೯ ಮತಗಳು ಜೆಡಿಎಸ್‌ಗೆ ಮುನ್ನಡೆಯಾಗಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿರುವ ಶಾಸಕರುಗಳು ಕ್ಷೇತ್ರದಲ್ಲಿಯೇ ಕಾಂಗ್ರೆಸ್ ಹಿನ್ನಡೆಯಾಗಿದೆ.
ಬಿಜೆಪಿ-ಜೆಡಿಎಸ್ ಮತಗಳು ಒಟ್ಟುಗೂಡಿರುವ ಕಾರಣ ಜೆಡಿಎಸ್‌ಗೆ ಮತಗಳ ಅಂತರವೂ ಹೆಚ್ಚಾಗಿವೆ, ಕೆಜಿಎಫ್ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ೫೦ ಸಾವಿರ ಲೀಡ್ ಇತ್ತು, ಲೋಕಸಭಾ ಚುನಾವಣೆಯಲ್ಲಿ ಲೀಡ್ ಕಡಿಮೆಯಾಗಿದೆ.
ಬಿಜೆಪಿ-ಜೆಡಿಎಸ್ ಮತಗಳು ಒಟ್ಟುಗೂಡಿರುವ ಕಾರಣ ಮೈತ್ರಿ ಅಭ್ಯರ್ಥಿ ಗೆಲುವಿನ ಅಂತರ ಹೆಚ್ಚಾಗಬೇಕಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಂದ ಕಾಂಗ್ರೆಸ್‌ಗೆ ಮತಗಳು ಪರಿವರ್ತನೆಯಾಗಿರುವುದರಿಂದ ಜೆಡಿಎಸ್ ಅಭ್ಯರ್ಥಿಯ ಗೆಲುವಿನ ಅಂತರ ಕಡಿಮೆಯಾಗಲು ಸಾಧ್ಯವಾಗಿದೆ.
ಕಳೆದ ೫ ವರ್ಷಗಳ ಹಿಂದೆ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ೨ ಲಕ್ಷ ಅಧಿಕ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದರು, ಆದರೆ ಈ ಬಾರಿ ಬಿಜೆಪಿ ಜೆಡಿಎಸ್ ಒಂದಾಗಿದ್ದರೂ ಗೆಲುವಿನ ಅಂತರ ಕಡಿಮೆಯಾಗಿದೆ. ಕಾಂಗ್ರೆಸ್ ಕಳೆದ ೫ ವರ್ಷಕ್ಕಿಂತ ಮತಗಳ ಅಂತರ ವೃದ್ದಿಯಾಗಿದೆ.