ಕಾಂಗ್ರೇಸ್ ಪಕ್ಷದ ವತಿಯಿಂದ ಉಚಿತ ಆಂಬುಲೆನ್ಸ್ ಸೇವೆ

ಹನೂರು: ಮೇ.31: ಕೊವೀಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಜನತೆಯ ನೆರವಿಗೆ ಕಾಂಗ್ರೇಸ್ ಪಕ್ಷ ಮುಂದಾಗಿದ್ದು ರಾಜ್ಯಾದ್ಯಾಂತ ವಿವಿಧ ಸೇವೆಗಳನ್ನು ಒದಗಿಸುವ ದಿಸೆಯಲ್ಲಿ ಶ್ರಮಿಸುತ್ತಿದೆ ಎಂದು ಮಾಜಿ ಸಂಸದ ಹಾಗೂ ರಾಜ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್
ಹನೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ಉಚಿತ ಆಂಬುಲೆನ್ಸ್ ಸೇವೆ ಆರೋಗ್ಯ ರಥ ವಾಹನವನ್ನು ಸರ್ಕಾರಿ ಆಸ್ಪತ್ರೆಗೆ ಹಸ್ತಾಂತರಿಸಿ ನಂತರ ಮಾತನಾಡಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಉಚಿತ ಆಂಬುಲೆನ್ಸ್ ಸೇವೆ, ಸ್ಯಾನಿಟೈಸರ್, ಮಾಸ್ಕ್ ವಿತರಣೆ ಸೇರಿದಂತೆ ಔಷಧೋಪಚಾರಗಳನ್ನು ವಿತರಿಸಲಾಗುತ್ತಿದೆ. ಈಗಾಗಲೇ ಪಕ್ಷ ಹಾಗೂ ವೈಯಕ್ತಿಕವಾಗಿ ನಂಜನಗೂಡು ಹಾಗೂ ಕೊಳ್ಳೇಗಾಲಕ್ಕೆ ಆಂಬುಲೇನ್ಸ್ ನೀಡಲಾಗಿದ್ದು, ಶಾಸಕ ಆರ್.ನರೇಂದ್ರ ಅವರ ಕೋರಿಕೆ ಮೇರೆಗೆ ಹನೂರು ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗುತ್ತಿದೆ. ಆಂಬುಲೇನ್ಸ್ ಖರ್ಚುವೆಚ್ಚಗಳನ್ನು ಪಕ್ಷದ ವತಿಯಿಂದ ಭರಿಸಲಾಗುವುದು ಜನತೆ ಆಂಬುಲೆನ್ಸ್ ಅನುಕೂಲವನ್ನು ಪಡೆದುಕೊಳ್ಳಬೇಕು ಎಂದರು.
ಸರ್ಕಾರಕ್ಕೆ ಒತ್ತಾಯ:
ಜಿಲ್ಲೆಯಲ್ಲಿ ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದ ನಂತರ ಆಕ್ಸಿಜನ್ ಕೊರತೆಯಿಂದ 36 ಜನ ಮೃತಪಡಲು ಸರ್ಕಾರದ ವೈಫಲ್ಯ ಕಾರಣವಾಗಿದೆ. ಮೃತಪಟ್ಟವರಲ್ಲಿ ಬಹುತೇಕರು ಯುವಕರು, ಮನೆಯ ಜವಬ್ದಾರಿಯನ್ನು ಹೊತ್ತಿದ್ದವರು ಅಂತಹ ಕುಟುಂಬಕ್ಕೆ ಕೇವಲ 2 ಲಕ್ಷ ರೂ.ಪರಿಹಾರ ನೀಡಿದರೆ ಸಾಲದು ತಲಾ 36 ಕುಟುಂಬಗಳಿಗೆ 20 ಲಕ್ಷ ರೂ.ಗಳ ಪರಿಹಾರವನ್ನು ನೀಡಬೇಕು. ಸರ್ಕಾರ ಕೋವಿಡ್ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ಮಾಹಿತಿ ನೀಡುತ್ತಿದೆ. ಇಳಿಕೆಯಾಗಲು ಕಾರಣ ಕೊವಿಡ್ ಟೆಸ್ಟ್‍ಗಳನ್ನು ಕಡಿಮೆ ಮಾಡಿರುವುದು. ಆದ್ದರಿಂದ ಸರ್ಕಾರ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಕೋವಿಡ್ ಟೆಸ್ಟ್‍ಗೆ ಅವಕಾಶ ಕಲ್ಪಿಸಿಕೊಡಬೇಕು. ಕೋವಿಡ್ ವ್ಯಾಕ್ಸಿನೆಷನ್ ತ್ವರಿತಗತಿಯಲ್ಲಿ ಸರಬರಾಜು ಮಾಡಬೇಕು. ಇದರಿಂದ ಸೋಂಕಿನ ಪ್ರಮಾಣ ಕಡಿಮೆಯಾಗುತ್ತದೆ ಎಂದ ಅವರು ಹೂ, ಹಣ್ಣು ಬೆಳೆಯುವ ರೈತರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಪರಿಹಾರವನ್ನು 10 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಾಸಕ ಆರ್.ನರೇಂದ್ರ, ರಾಮಾಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಈಶ್ವರ್, ಮುಖಂಡರಾದ ಶಿವಕುಮಾರ್, ತಾ.ಪಂ.ಸದಸ್ಯ ಜವಾದ್‍ಅಹಮ್ಮದ್ ಸೇರಿದಂತೆ ಪ.ಪಂ.ಸದಸ್ಯರು ಹಾಗೂ ಕಾರ್ಯಕರ್ತರು ಇದ್ದರು.