
ತುಮಕೂರು, ಆ. ೨೯- ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂಬುದು ಮಾಧ್ಯಮದವರ ಕಪೋಲ ಕಲ್ಪಿತ. ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಮ್ಮ ಪಕ್ಷ ನನಗೆ ಐದು ಬಾರಿ ಟಿಕೆಟ್ ನೀಡಿದೆ. ಎರಡು ಬಾರಿ ರಾಜ್ಯ ಕಾರ್ಯದರ್ಶಿ, ಎರಡು ಬಾರಿ ಜಿಲ್ಲಾ ಘಟಕದ ಅಧ್ಯಕ್ಷ, ಒಂದು ಬಾರಿ ಮೈಸೂರ್ ಪೇಪರ್ ಮಿಲ್ ನ ಅಧ್ಯಕ್ಷರನ್ನಾಗಿ ಮಾಡಿದೆ. ನನ್ನ ಪಕ್ಷ ನನಗೆ ತಾಯಿ ಸಮಾನ. ನಾನು ಎಂದಿಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ, ನಡೆಸುವುದೂ ಇಲ್ಲ. ಮುಂದೆಯೂ ಕೂಡ ಪಕ್ಷದಲ್ಲೇ ಇರುತ್ತೇನೆ ಎಂದು ಗ್ರಾಮಾಂತರ ಶಾಸಕ ಬಿ. ಸುರೇಶ್‌ಗೌಡ ಸ್ಪಷ್ಟಪಡಿಸಿದ್ದಾರೆ.
ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಸಂಗಳಾಪುರ ಗ್ರಾಮದಲ್ಲಿ ಅಂದಾಜು ೩೪.೫ ಲಕ್ಷ ರೂಪಾಯಿಗಳಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಾನು ವಾಜಪೇಯಿ, ನರೇಂದ್ರ ಮೋದಿ, ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಯಡಿಯೂರಪ್ಪ ಅಂತಹ ದೂರದೃಷ್ಟಿತ್ವವುಳ್ಳ ನಾಯಕತ್ವವನ್ನು ನೋಡಿ ಅಂದು ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಬಿಜೆಪಿಗೆ ಸೇರ್ಪಡೆಯಾಗಿ ಕುಣಿಗಲ್‌ನಲ್ಲಿ ಟಿಕೆಟ್ ಪಡೆದಿದ್ದೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಹೋಗಿ ನನಗೆ ಆಗಬೇಕಾದ್ದು ಏನೂ ಇಲ್ಲ. ನಮ್ಮ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಕ್ಷೇತ್ರದ ಶಾಸಕನಾಗಿ ಕ್ಷೇತ್ರಕ್ಕೆ ನಾನೇ ಮಂತ್ರಿ, ನಾನೇ ಮುಖ್ಯಮಂತ್ರಿ ಎಂದರು.
ಆರ್.ಸಿ. ಕಾಲೇಜಿನ ವಿದ್ಯಾರ್ಥಿ ದಿಸೆಯಿಂದಲೂ ಕೂಡ ನನ್ನ ಅನೇಕ ಸ್ನೇಹಿತರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಅವರ ವಿಶ್ವಾಸ ಈಗಲೂ ಇದೆ. ಮುಂದೆಯೂ ಇರುತ್ತದೆ. ಹಾಗಂತ ನಾನು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ ಎಂದರು.
ಹರಿಜನ/ಗಿರಿಜನ ಉಪಯೋಜನೆ ಹಾಗೂ ೩೦೫೦/೫೦೫೪ ಯೋಜನೆಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಸುಸಜ್ಜಿತ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಸುಸಜ್ಜಿತವಾಗಿ ರಸ್ತೆ ಕುಡಿಯುವ ನೀರು, ಚರಂಡಿ, ೨೪ ಗಂಟೆ ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.
ನನ್ನ ಕಾಲಾವಧಿಯಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಮಾಡಿದಂತ ಕಾಮಗಾರಿಗಳು ಇಂದಿಗೂ ಒಂದೇ ಒಂದು ರಸ್ತೆ ಕೂಡ ಹಾನಿಯಾಗಿಲ್ಲ. ಅಷ್ಟು ಗುಣಮಟ್ಟದ ಕಾಮಗಾರಿಗಳಾಗುವಂತೆ ಹಗಲು ರಾತ್ರಿ ಎನ್ನದೆ ಗುತ್ತಿಗೆದಾರರನ್ನು ಬೆನ್ನತ್ತಿ ಕೆಲಸ ಮಾಡಿಸುತ್ತಿದ್ದೆ ಎಂದು ಹೇಳಿದರು.
ಈಗಲೂ ಕೂಡ ಕಾಮಗಾರಿಯ ಗುಣಮಟ್ಟದಲ್ಲಿ ನಾನು ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ. ಸಿಮೆಂಟ್ ರಸ್ತೆ ಚರಂಡಿ ನಿರ್ಮಾಣ ಮಾಡುವಾಗ ತಾಂತ್ರಿಕತೆಗನಗುಣವಾಗಿ ಮರಳು ಸಿಮೆಂಟ್ ಜಲ್ಲಿ ಬಳಕೆ ಮಾಡಿ ಗುಣಮಟ್ಟದ ಕಾಮಗಾರಿಯನ್ನು ಮಾಡಬೇಕು. ಆಗ ಮಾತ್ರ ನಾನು ಸೌಮ್ಯವಾಗಿರುತ್ತೇನೆ. ಇಲ್ಲವಾದಲ್ಲಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಲು ನನ್ನ ಲೆಟರ್ ಹೆಡ್ ಖಾರವಾಗಿ ಕೆಲಸ ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಮಾಸ್ತೇಗೌಡ, ಕಲ್ಕೆರೆ ಪಟೇಲರು, ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಲಕ್ಷ್ಮೀ ದೇವಮ್ಮ, ಉಪಾಧ್ಯಕ್ಷ ಬಾಬಣ್ಣ, ಶಿವಕುಮಾರ್ ಆರ್.ಸಿ, ನರಸಯ್ಯ, ಕೃಷ್ಣಪ್ಪ, ನರಸಿಂಹಮೂರ್ತಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಉಮಾಶಂಕರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.