ಕಾಂಗ್ರೆಸ್ ಸೇರಿದ ಶೆಟ್ಟರ್

ಬಿಜೆಪಿಯಲ್ಲಿ ಟಿಕೆಟ್ ದೊರೆಯದ ಮುಖಂಡ ಜಗದೀಶ್ ಶೆಟ್ಟರ್ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಮುಖಂಡ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ, ಮುಖಂಡ ವೇಣುಗೋಪಾಲ್ ಇತರರು ಇದ್ದಾರೆ.

ಬೆಂಗಳೂರು,ಏ.೧೭.ಬಿಜೆಪಿ ನಾಯಕರ ವಿರುದ್ಧ ಸಿಡಿದೆದ್ದು ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ಅವರು ಕಮಲ ಬಿಟ್ಟು ಕೈ ಹಿಡಿದಿದ್ದಾರೆ.ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟರ್ ಅವರು ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.ಜಗದೀಶ್‌ಶೆಟ್ಟರ್ ಅವರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಭಾಗಿಯಾಗಿ ಅವರನ್ನು ಕಾಂಗ್ರೆಸ್‌ಗೆ ಬರ ಮಾಡಿಕೊಂಡರು.ಕಾಂಗ್ರೆಸ್ ಪಕ್ಷದ ಧ್ವಜ ನೀಡುವ ಮೂಲಕ ಜಗದೀಶ್‌ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಲಾಯಿತು. ಹಾಗೆಯೇ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಬಿ ಫಾರಂನ್ನು ಶೆಟ್ಟರ್ ಅವರಿಗೆ ಇದೇ ಕಾರ್ಯಕ್ರಮದಲ್ಲಿ ನೀಡಲಾಯಿತು.ಕಾಂಗ್ರೆಸ್ ಸೇರಿರುವ ಶೆಟ್ಟರ್ ಅವರು ಈ ಚುನಾವಣೆಯಲ್ಲಿ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಇವರುಗಳು ಶೆಟ್ಟರ್ ಅವರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಹಾಜರಿದ್ದು ಅವರನ್ನು ಪಕ್ಷಕ್ಕೆ ಬರ ಮಾಡಿಕೊಡರು.ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಜಗದೀಶ್‌ಶೆಟ್ಟರ್ ಅವರ ಜತೆ ಹಲವು ನಾಯಕರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ನಮ್ಮ ಪಕ್ಷದ ನೀತಿ, ಸಿದ್ದಾಂತ ಒಪ್ಪಿಕೊಂಡು ಪಕ್ಷ ಸೇರ್ಪಡೆಯಾಗಿದ್ದಾರೆ. ಅವರಿಗೆ ಪಕ್ಷಕ್ಕೆ ಸ್ವಾಗತ ಕೋರುತ್ತೇನೆ ಎಂದರು.ಜಗದೀಶ್ ಶೆಟ್ಟರ್ ಅವರ ಕಾಂಗ್ರೆಸ್ ಸೇರ್ಪಡೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬರಲಿದೆ ಎಂದರು.ಜಗದೀಶ್‌ಶೆಟ್ಟರ್ ಅವರು ಸರಳ ಸಜ್ಜನಿಕೆಯ ರಾಜಕಾರಣಿ. ಅವರ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬಂದಿದೆ ಎಂದು ಅವರು ಹೇಳಿದರು.
ಶೆಟ್ಟರ್ ಅವರು ಸಂಘ ಪರಿವಾರದ ಮೂಲದವರಾದರೂ ಯಾವತ್ತೂ ಕೂಡ ಜನವಿರೋಧಿಯಾಗಿ ನಡೆದುಕೊಳ್ಳಲಿಲ್ಲ. ಒಬ್ಬ ಸಜ್ಜನ ರಾಜಕಾರಣಿ, ಅವರ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಹೆಚ್ಚಿನ ಬಲ ಬಂದಿದೆ. ಹಾಗೆಯೇ ರಾಷ್ಟ್ರಮಟ್ಟದಲ್ಲೂ ಇದು ಬದಲಾವಣೆಯ ದಿಕ್ಸೂಚಿಯಾಗಲಿದೆ ಎಂದು ಖರ್ಗೆ ಹೇಳಿದರು.
ಸುರ್ಜೇವಾಲಾ ಮಾತು
ರಾಜ್ಯದಲ್ಲಿ ಹೊಸ ಅಧ್ಯಾಯ, ಹೊಸ ಇತಿಹಾಸ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ಅವರು ಕಾಂಗ್ರೆಸ್ ಕುಟುಂಬ ಸೇರಿದ್ದಾರೆ. ಅವರಿಗೆ ಸ್ವಾಗತ ಎಂದರು.ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಪಕ್ಷದ ಸೇರಿದ ಜಗದೀಶ್‌ಶೆಟ್ಟರ್ ಅವರನ್ನು ಅಭಿನಂದಿಸಿ ಪುಷ್ಪಗುಚ್ಛ ನೀಡಿ ಸಂತಸ ವ್ಯಕ್ತಪಡಿಸಿದರು.