ಕಾಂಗ್ರೆಸ್ ಸೇರಲ್ಲ: ವದಂತಿಗಳಿಗೆ ಡಿವಿಎಸ್ ತೆರೆ

ಬೆಂಗಳೂರು, ಮಾ. ೨೧- ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿರುವ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಕಾಂಗ್ರೆಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಸೇರಲ್ಲ, ಬಿಜೆಪಿಯಲ್ಲೇ ಇರುತ್ತೇನೆ. ಬಿಜೆಪಿಯನ್ನು ಸಿದ್ಧಗೊಳಿಸುವ ಕೆಲಸ ಮಾಡುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ನನಗೆ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಟಿಕೆಟ್ ಕೈತಪ್ಪಿದ್ದಕ್ಕೆ ಸದಾನಂದಗೌಡರಿಗೆ ನೋವಾಗಿದೆ ಎಂದು ಎಲ್ಲರೂ ಹೇಳಿದರು ನಿಜ. ನನಗೆ ಟಿಕೆಟ್ ಕೈತಪ್ಪಿದ್ದಕ್ಕೆ ನೋವು, ಬೇಸರ ಎಲ್ಲವೂ ಆಗಿದೆ ಎಂದರು.
ಕಾಂಗ್ರೆಸ್‌ನವರು ನನ್ನನ್ನು ಸಂಪರ್ಕಿಸಿದ್ದು ನಿಜ. ಯಾವ ಕ್ಷೇತ್ರ ಕೇಳಿದರೂ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿದರು. ನಾನು ಹೋಗುವುದೂ ಇಲ್ಲ. ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ನಾನು ಪಕ್ಷಕ್ಕೆ ಕೊಡಬೇಕಾದದ್ದು ಇನ್ನೂ ಇದೆ. ಬಿಜೆಪಿಯಲ್ಲೇ ಇದ್ದು, ಬಿಜೆಪಿ ಶುದ್ಧೀಕರಣಕ್ಕೆ ಹೋರಾಟ ಮಾಡುತ್ತೇನೆ ಎಂದರು.
ದೇಶದಲ್ಲಿ ಮೋದಿಯವರು ಮೂರನೇ ಬಾರಿಗೆ ಪ್ರಧಾನಿ ಆಗಬೇಕು. ಇದಕ್ಕಾಗಿ ನಾನು ಪಕ್ಷದ ಪರ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.
ಕೆಲವರು ನನ್ನನ್ನು ಕೊಟ್ಟ ಕುದುರೆಯನ್ನು ಏರಲಾರದ ಧೀರನೂ, ಶೂರನೂ ಅಲ್ಲ ಎಂದು ವಿಶ್ಲೇಷಣೆ ಮಾಡಿದರು. ಇದು ಸರಿಯಲ್ಲ, ನಾನು ನನಗೆ ಕೊಟ್ಟ ಎಲ್ಲ ಖಾತೆಗಳನ್ನು ಸಮರ್ಥವಾಗಿಯೇ ನಿಭಾಯಿಸಿದ್ದೇನೆ ಎಂದರು.

ಯಡಿಯೂರಪ್ಪ ವಿರುದ್ಧ ಸದಾನಂದಗೌಡ ವಾಗ್ದಾಳಿ
ಬೆಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿರುವ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರು ಯಡಿಯೂರಪ್ಪ ಮತ್ತು ಅವರ ಕುಟುಂಬದ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ಈಶ್ವರಪ್ಪ ಬಿಎಸ್‌ವೈ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವಾಗಲೇ ಸದಾನಂದಗೌಡ ಅವರು ಸಹ ಯಡಿಯೂರಪ್ಪ ಮತ್ತು ಅವರ ಕುಟುಂಬ ರಾಜಕಾರಣದ ವಿರುದ್ಧ ಕಿಡಿಕಾರಿದ್ದಾರೆ.
ನನಗೆ ಟಿಕೆಟ್ ತಪ್ಪಿಸಿದ್ದು ಯಾರೆಂಬುದು ಗೊತ್ತಿದೆ ಎಂದು ಹೇಳುವ ಮೂಲಕ ಯಡಿಯೂರಪ್ಪನವರೇ ತಮಗೆ ಟಿಕೆಟ್ ಕೈ ತಪ್ಪಲು ಕಾರಣ ಸದಾನಂದಗೌಡ ಪರೋಕ್ಷವಾಗಿ ದೂರಿದರು.
ರಾಜ್ಯದಲ್ಲಿ ಬಿಜೆಪಿ ಜವಾಬ್ದಾರಿ ಹೊತ್ತವರು ಸ್ವಾರ್ಥಿಗಳಾಗಿದ್ದಾರೆ. ನಾನು, ನನ್ನ ಮಕ್ಕಳು, ಕುಟುಂಬ, ನನ್ನ ಚೇಲಾಗಳಿಗೆ, ನನ್ನ ಜಾತಿಯವರಿಗೆ ಮಾತ್ರ ಬಿಜೆಪಿ ಎಂಬ ಧೋರಣೆಯನ್ನು ಹೊಂದಿದ್ದಾರೆ. ಒಂದು ಕುಟುಂಬದ ಹಿಡಿತಕ್ಕೆ ಸಿಕ್ಕಿರುವ ಪಕ್ಷ ಅವರ ಹಿಡಿತದಿಂದ ಹೊರ ಬರಬೇಕು. ನಮ್ಮ ಪಕ್ಷದ ಶುದ್ಧೀಕರಣ ಆಗುವವರೆಗೂ ವಿರಮಿಸಲ್ಲ ಎಂದು ಸದಾನಂದಗೌಡ ಸಿಟ್ಟಿನಿಂದ ಹೇಳುವ ಮೂಲಕ ಯಡಿಯೂರಪ್ಪನವರ ಹಿಡಿತದಿಂದ ಪಕ್ಷವನ್ನು ತಪ್ಪಿಸಬೇಕು ಎಂಬ ಅರ್ಥದಲ್ಲಿ ಮಾತನಾಡಿದರು.
ರಾಜಕಾರಣದಲ್ಲಿ ಏಕಸ್ವಾಮ್ಯ, ಸರ್ವಾಧಿಕಾರಿ ಧೋರಣೆ ಪಕ್ಷಕ್ಕೆ ಒಳ್ಳೆಯದಲ್ಲ. ಪ್ರಧಾನಿ ಮೋದಿಯವರ ಆಶಯದಂತೆ ಬಿಜೆಪಿ ಜನಪರ ಪಕ್ಷವಾಗಬೇಕು. ಕುಟುಂಬ ರಾಜಕಾರಣದಿಂದ ಹೊರ ಬರಬೇಕು. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಸದ್ಯದ ಬೆಳವಣಿಗೆ ಬಗ್ಗೆ ಚಿಂತೆ ಮಾಡುವುದು ಬೇಡ. ಮುಂದೆ ನಾವೆಲ್ಲರೂ ಸೇರಿ ಪಕ್ಷವನ್ನು ಶುದ್ಧೀಕರಣ ಮಾಡೋಣ. ಪಕ್ಷದಲ್ಲೇ ಇದ್ದು ಶುದ್ಧೀಕರಣ ಮಾಡುವ ಶಪಥ ನಮ್ಮದು ಎಂಬ ಅರ್ಥದಲ್ಲಿ ಅವರು ಮಾತನಾಡಿದರು.
ಚುನಾವಣೆ ನಂತರ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಆಗಬೇಕು. ಆ ಕೆಲಸವನ್ನು ಹೈಕಮಾಂಡ್ ಗಮನಕ್ಕೆ ತಂದು ನಾವೆಲ್ಲಾ ಮಾಡೋಣ. ಪಕ್ಷವನ್ನು ಶುದ್ಧೀಕರಣ ಮಾಡಿ, ಕುಟುಂಬ ರಾಜಕಾರಣದಿಂದ ಪಾರು ಮಾಡೋಣ ಎಂದು ಅವರು ಹೇಳಿದರು.