
ತಿ.ನರಸೀಪುರ: ಮೇ.14:- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷವು ಅದ್ಭುತ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಾಲೂಕಿನ ವಿವಿಧಡೆ ಸಂಭ್ರಮಾಚರಣೆ ನಡೆಸಿದರು.
ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಪಟ್ಟಣದ ವಿನಾಯಕ ಕಾಲೋನಿ, ವಿದ್ಯೋದಯ ಕಾಲೇಜು ವೃತ್ತ ಮತ್ತು ಹೆಳವರಹುಂಡಿ ಗ್ರಾಮಗಳಲ್ಲಿ ವಿಜಯೋತ್ಸವ ಆಚರಿಸಿದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ನಂತರ ಮಾತನಾಡಿದ ಪುರಸಭೆ ಅಧ್ಯಕ್ಷ ನಂಜುಂಡಸ್ವಾಮಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಕರ್ನಾಟಕದ ಮತದಾರರಿಗೆ ಅಭಿನಂದನೆ ಸಲ್ಲಿಸಿದರು.ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆಯವರ ಮಾರ್ಗದರ್ಶನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಪ್ರಚಂಡ ಗೆಲುವು ಸಾಧಿಸಿ ಅಧಿಕಾರದತ್ತ ದಾಪುಗಾಲು ಹಾಕಿದೆ.ಸಿದ್ದರಾಮಯ್ಯನವರು ಎರಡನೇ ಬಾರಿ ಮುಖ್ಯಮಂತ್ರಿ ಆಗುವ ನಿರೀಕ್ಷೆ ಇದೆ.ಅಲ್ಲದೆ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಗೃಹಲಕ್ಷ್ಮಿ ಯೋಜನೆ ,ನಿರುದ್ಯೋಗಿ ಭತ್ಯೆ,ಅನ್ನಭಾಗ್ಯ ಮತ್ತು ಉಚಿತ ವಿದ್ಯುತ್ ಗ್ಯಾರಂಟಿಗಳನ್ನು ತುರ್ತು ಈಡೇರಿಸುವ ಭರವಸೆ ವ್ಯಕ್ತಪಡಿಸಿದರು.
40% ಬಿಜೆಪಿ ಸರ್ಕಾರದ ಬೆಲೆಯೇರಿಕೆ ,ಜನವಿರೋಧಿ ನೀತಿಗಳಿಂದ ರೋಸಿ ಹೋಗಿದ್ದ ರಾಜ್ಯದ ಜನತೆ ಬಿಜೆಪಿ ಪಕ್ಷಕ್ಕೆ ತಕ್ಕಪಾಠ ಕಲಿಸಿದ್ದಾರೆ.ದಕ್ಷಿಣ ಭಾರತದ ಜನತೆ ಪ್ರಜ್ಞಾವಂತರಾಗಿದ್ದು,ಸುಳ್ಳು ಆಶ್ವಾಸನೆ ನೀಡುವ ಬಿಜೆಪಿ ಪಕ್ಷವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಶಾಸ್ತಿ ಆಗಲಿದೆ ಎಂದರು.
ಕರ್ನಾಟಕ ರಾಜ್ಯದ ಚುನಾವಣೆ ಫಲಿತಾಂಶವು 2024ರಲ್ಲಿ ನಡೆಯಲಿರುವ ಸಂಸತ್ ಚುನಾವಣೆಗೆ ದಿಕ್ಸುಚಿ ಆಗಲಿದೆ.ಕಳೆದ 9 ವರ್ಷಗಳಿಂದ ಕೇಂದ್ರದಲ್ಲಿರುವ ಬಿಜೆಪಿಯ ದುರಾಡಳಿತ ಅಂತ್ಯವಾಗಲಿದೆ.ಈ ಮೂಲಕ ದೇಶದಲ್ಲಿರುವ ಅಘೋಷಿತ ತುರ್ತು ಪರಿಸ್ಥಿತಿ ಕೊನೆಯಾಗಲಿದೆ ಎಂದರು.
ಸಂದರ್ಭದಲ್ಲಿ ರುದ್ರ, ನಾಗರಾಜು, ದೇವರಾಜು, ಇಲಿಯಾಸ್, ಇಮ್ರಾನ್, ಸೋಮಣ್ಣ, ಶಾಂತರಾಜು, ಮಧು, ಯೋಗೇಶ್, ಅಸ್ಲಾಂ ಹಾಜರಿದ್ದರು.