ಕಾಂಗ್ರೆಸ್ ಸಾರಥ್ಯ ರಾಹುಲ್ ಹಿಂದೇಟು

ನವದೆಹಲಿ ಡಿಸೆಂಬರ್ ೩೦. ವಿದೇಶ ಪ್ರವಾಸದಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವ ಬಗ್ಗೆ ಯಾವುದೇ ಆಸಕ್ತಿ ಇಲ್ಲ ಎಂಬುದು ಪಕ್ಷದ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.

ಯಾರಿಗೂ ಹೇಳದೆ ಖಾಸಗಿಯಾಗಿ ವಿದೇಶ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿಯವರು ಸ್ವದೇಶಕ್ಕೆ ಮರಳಿದ ಮೇಲೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳುವ ಸಾಧ್ಯತೆಗಳು ತೀರ ಕಡಿಮೆ ಎಂದು ಹೇಳಲಾಗುತ್ತಿದೆ.

೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಹುಲ್ ಗಾಂಧಿಯವರು ಮತ್ತೆ ಆ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂಬ ವಿಚಾರದಲ್ಲಿ ಅನುಮಾನಗಳು ಉಂಟಾಗಿವೆ.

ಹಲವಾರು ಕಾಂಗ್ರೆಸ್ ನ ಹಿರಿಯ ಮುಖಂಡರು ಹಾಗೂ ರಾಹುಲ್ ಗಾಂಧಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಾಯಕರು ಸಹ ಈ ವಿಚಾರದಲ್ಲಿ ಗೊಂದಲದಲ್ಲಿದ್ದಾರೆ. ಕೆಲವರ ಪ್ರಕಾರ ರಾಹುಲ್ ಅವರು ಪಕ್ಷದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಹಿಂಜರಿಯುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಿದೇಶದಿಂದ ಮರಳಿದ ನಂತರವೂ ಅವರು ಮನಸ್ಸು ಬದಲಾಯಿಸಿಕೊಳ್ಳುವಂತೆ ಅವರ ಮೇಲೆ ಒತ್ತಡ ಹೇರುವ ಪ್ರಯತ್ನ ಮುಂದುವರಿಯಲಿದೆ ಎಂದು ಈ ನಾಯಕರು ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳುವ ಸಾಧ್ಯತೆಗಳು ಇಲ್ಲ ಎಂದು ಮತ್ತೊಬ್ಬ ನಾಯಕರು ಹೇಳಿದ್ದಾರೆ.

ಪಕ್ಷದ ೧೩೬ ನೇ ಸಂಸ್ಥಾಪನಾ ದಿನಾಚರಣೆ ಇದ್ದರೂ ರಾಹುಲ್ ಅವರು ತಮ್ಮ ವಿದೇಶ ಪ್ರವಾಸ ಕುರಿತು ಯಾರಿಗೂ ಹೇಳದೆ ತೆರಳಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ವೇದಿಕೆ ಒದಗಿಸಿದೆ.

ವಿಶೇಷವಾಗಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಲಕ್ಷಾಂತರ ರೈತರು ದೆಹಲಿಯಲ್ಲಿ ಬೀಡು ಬಿಟ್ಟು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ವಿದೇಶ ಪ್ರವಾಸಕ್ಕೆ ಹೋಗಿರುವುದು ಚರ್ಚೆಯ ವಿಷಯವಾಗಿದೆ.