ಕಾಂಗ್ರೆಸ್ ಸರ್ಕಾರ ಬರಬೇಕೆನ್ನುವುದು ಜನಗಳ ಆಸೆ; ಶಾಮನೂರು ಶಿವಶಂಕರಪ್ಪ

ದಾವಣಗೆರೆ.ಮೇ.೧೪: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕೆನ್ನುವುದು ಜನಗಳ ಆಸೆಯಾಗಿತ್ತು. ಅದರಂತೆ ಜನಗಳು ತಮ್ಮ ತೀರ್ಪು ನೀಡಿದ್ದಾರೆ. ರಾಜ್ಯದ ಫಲಿತಾಂಶದಿಂದಾಗಿ ನನಗೆ ಅತೀವ ಸಂತೋಷವಾಗಿದೆ ಎಂದು ಕಾಂಗ್ರೆಸ್‍ನ ಹಿರಿಯ ಮುಖಂಡ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವಿಜೇತ ಅಭ್ಯರ್ಥಿ ಡಾ.ಶಾಮನೂರು ಶಿವಶಂಕರಪ್ಪ ಹರ್ಷ ವ್ಯಕ್ತ ಪಡಿಸಿದರು.ನಗರದ ಹೊರವಲಯದಲ್ಲಿರುವ ತೋಣಹುಣಸೆಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮತ ಎಣಿಕೆಯ ನಂತರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿ ರೇಣುಕಾ ಅವರಿಂದ ಶಾಸಕರ ಪ್ರಮಾಣ ಪತ್ರ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಶಾಸಕರೆಲ್ಲರೂ ಸೇರಿ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲಿದ್ದು, ಅದನ್ನು ಪಕ್ಷದ ವರಿಷ್ಠರಿಗೆ ರವಾನಿಸಲಿದ್ಧೇವೆ. ಹೈಕಮಾಂಡ್ ಒಪ್ಪಿದ ನಂತರ ಮುಖ್ಯ ಮಂತ್ರಿ ಯಾರಾಗುತ್ತಾರೆ ಎಂದು ಅಂತಿಮ ಆಗಲಿದೆ. ನಾವುಗಳ ಸದಾ ಜನಗಳ ಮಧ್ಯೆ ಇದ್ದ ಕಾರಣವೇ ಜನರು ನಮ್ಮನ್ನು ಇಷ್ಟ ಪಡಲು ಕಾರಣ ಎಂದರು.ರಾಜ್ಯದಲ್ಲಿ ಬಿಜೆಪಿಯ ದುರಾಡಳಿತ ತಡೆಯಲು ಕಾಂಗ್ರೆಸ್ ಪಕ್ಷ ಬಹಳಷ್ಟು ಕಷ್ಟ ಪಟ್ಟಿತ್ತು. ಆದನ್ನು ರಾಜ್ಯ ಜನತೆ ತಮ್ಮ ಮತದಾನದ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಹಿಂದೆ ಕಾಂಗ್ರೆಸ್ಸಿಗೆ ಹಿನ್ನೆಡೆಯಾಗಿತ್ತು. ಆದರೆ ರಾಜ್ಯದ ಜನತೆ ಬಿಜೆಪಿಯ ಆಡಳಿತ ನೋಡಿ ಬೇಸತ್ತು ಮತ್ತೆ ಕಾಂಗ್ರೆಸ್ ಪಕ್ಷವನ್ನು ಆರಿಸಿದೆ. ಸರ್ಕಾರ ರಚಿಸಲು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.ಲಿಂಗಾಯುತ ಸಿಎಂ ಕುರಿತಂತೆ ನಾವುಗಳು ಪಕ್ಷದ ವರಿಷ್ಠರ ಮುಂದೆ ಬೇಡಿಕೆ ಇಡಲಿದ್ದೇವೆ. ಬಿಜೆಪಿ ಅಭ್ಯರ್ಥಿ ಈ ಹಿಂದೆ ಪಾಲಿಕೆ ಮೇಯರ್ ಆದಾಗ ಕೂಡ ಯಾವುದೇ ಕೆಲಸ ಮಾಡಿರಲಿಲ್ಲ. ಕೇವಲ ತನ್ನ ಜಾಗಗಳಿಗೆ ಡೋರ್‍ನಂಬರ್ ಕೊಟ್ಟಿದ್ದು, ವೀಕ್ ಅಭ್ಯರ್ಥಿ ಎಂದು ಅಂದೆಯೇ ಹೇಳಿದ್ದೇ. ಅದರಂತೆ ನಾನು ಯಾವುದೇ ಆಯಾಸ ಇಲ್ಲದೇ ಗೆದ್ದಿದ್ದೇನೆ ಎಂದರು.ಲೆಕ್ಕ ಪರಿಶೋಧಕ ಅಥಣಿ ಎಸ್.ವೀರಣ್ಣ ಮಾತನಾಡಿ, ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಯಾವುದೇ ಜಾತಿ, ಮತ, ಧರ್ಮ ನೋಡದೇ ಎಲ್ಲರೂ ಮತ ಹಾಕಿದ್ದಾರೆ. ಅತ್ಯಧಿಕ ಬಹುಮತದಿಂದ ಗೆಲುವು ಸಾಧಿಸಿದ್ದಾರೆ. ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿ ವಿಧಾನ ಸಭೆ ಪ್ರವೇಶಿಸಲಿದ್ದು, ಇದೀಗ ಅವರಿಗೆ 92 ವರ್ಷವಾಗಿದ್ದು, 97 ವರ್ಷದವರೆಗೂ ವಿಧಾನ ಸಭೆಯಲ್ಲಿ ಇರಲಿದ್ದಾರೆ ಎಂದರು.ಈ ವೇಳೆ ಶಾಸಕರ ಪುತ್ರ ಎಸ್.ಎಸ್.ಗಣೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಇತರರು ಇದ್ದರು.