ಕಾಂಗ್ರೆಸ್ ಸರ್ಕಾರ ಪಿಕ್ ಪಾಕೆಟ್ ಸರ್ಕಾರ: ಎಚ್‍ಡಿಕೆ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಏ.17:- ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಬರಗಾಲ ಬರುತ್ತಿದ್ದು, ಕಳೆದ ಏಳು ತಿಂಗಳಿಂದ ವಿವಿಧ ವಿವಿಧ ಯೋಜನೆಯ ಫಲಾನುಭವಿಗಳಿಗೆ ಹಣ ಹಾಕದೆ ಇರುವ ಕಾಂಗ್ರೆಸ್ ಸರ್ಕಾರ ಪಿಕ್ ಪಾಕೆಟ್ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ಪಟ್ಟಣದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಪರ ಪಟ್ಟಣದ ಬಿ ಎಂ ರಸ್ತೆಯಲ್ಲಿ ಮಂಗಳವಾರ ರೋಡ್ ಷೋ ನಡೆಸಿ ಮತಯಾಚನೆ ಮಾತನಾಡಿದರು. ಮಹಿಳೆಯರಿಗೆ 2,000 ಹಣ ನೀಡುವ ನೆಪದಲ್ಲಿ ಮದ್ಯದ ಬೆಲೆಯನ್ನು ಬೆಲೆಯನ್ನು ಏರಿಕೆ ಮಾಡುವ ಮೂಲಕ ಪಿಕ್ ಪಾಕೆಟ್ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು. ಜನವಿರೋಧಿ ನೀತಿ ಅನುಸರಿಸುತ್ತಿರುವ ಈ ಸರ್ಕಾರಕ್ಕೆ ಪಾಠ ಕಲಿಸುವ ಸಲುವಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಿ ಎಂದು ಕರೆ ನೀಡಿದರು. ಯದುವೀರ್ ಅತ್ಯಂತ ಸಂಭಾವಿತ ವ್ಯಕ್ತಿಯಾಗಿದ್ದು ಮಾದರಿ ಸಂಸದರಾಗಿ ಕೆಲಸ ಮಾಡುವ ಎಲ್ಲಾ ಅರ್ಹತೆ ಹೊಂದಿದ್ದಾರೆ, ಮತಗಟ್ಟೆಯಲ್ಲಿ ನಮ್ಮ ಪಕ್ಷದ ಚಿಹ್ನೆ ಕಾಣುತ್ತಿಲ್ಲವೆಂದು ಜೆಡಿಎಸ್ ಕಾರ್ಯಕರ್ತರು ಗೊಂದಲಕ್ಕೀಡಾಗುವುದು ಬೇಡ ಕಮಲದ ಗುರುತಿಗೆ ಮತ ನೀಡಿ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಮಾತನಾಡಿ ಮತ್ತೊಮ್ಮೆ ಮೋದಿ ಪ್ರಧಾನಮಂತ್ರಿಯಾಗಬೇಕು, ಅವರ ಕೈ ಬಲಪಡಿಸಲು ಯದುವೀರ್ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಶಾಸಕ ಜಿ.ಡಿ. ಹರೀಶ್, ಮಾಜಿ ಶಾಸಕ ಕೆ. ಮಹದೇವ್, ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ಮಾತನಾಡಿದರು.
ಸಂಚಾರ ವ್ಯವಸ್ಥೆ ಅಸ್ತವ್ಯಸ್ತ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧಗಂಟೆಗೆ ಹೆಚ್ಚು ಕಾಲ ಮುಖಂಡರುಗಳು ಭಾಷಣ ಮಾಡುತ್ತಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು, ನೂರಾರು ವಾಹನಗಳು ಕಾದು ನಿಲ್ಲುವಂತಾಗಿತ್ತು, ರೋಡ್ ಷೋ ಮುಗಿದ ನಂತರ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಪೆÇಲೀಸರು ಹರಸಾಹಸ ಪಟ್ಟರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎ. ಎಸ್.ರಾಮದಾಸ್, ಮಾಜಿ ಶಾಸಕ ಎಚ್. ಸಿ.ಬಸವರಾಜು, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ವಿ.ರಾಜೇಂದ್ರ, ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮುಖಂಡರಾದ ಕೆ.ಎನ್.ಸೋಮಶೇಖರ್, ಆರ್. ಟಿ. ಸತೀಶ್, ದೇವರಾಜ್ ಒಡೆಯರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.