
ದಾವಣಗೆರೆ.ಏ.೧೭: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರು 45ನೇ ವಾರ್ಡ್ನ ಮನೆ-ಮನೆಗೆ ತೆರಳಿ ಪ್ರಚಾರ ನಡೆಸಿದರು.ಕರೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ 45ನೇ ವಾರ್ಡ್ನ ಕರೂರು, ಯರಗುಂಟೆ, ಅಶೋಕ ನಗರ, ಎಸ್.ಎಂ.ಕೃಷ್ಣ ನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಮತಯಾಚಿಸಲಾಯಿತು.ಪ್ರಚಾರದಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಿದ ಶಾಮನೂರು ಶಿವಶಂಕರಪ್ಪನವರು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ಯಾರು ಸಹ ಉಪವಾಸ ಇರಲ್ಲ. ಪ್ರತಿಯೊಬ್ಬರಿಗೂ ಅನ್ನ, ಆಶ್ರಯವನ್ನು ಕಾಂಗ್ರೆಸ್ ಪಕ್ಷ ನೀಡುತ್ತಾ ಬಂದಿದೆ ಎಂದು ತಿಳಿಸಿದರು.ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಪ್ರತಿಯೊಬ್ಬರಿಗೂ 10ಕೆ.ಜಿ.ಅಕ್ಕಿ, ಪ್ರತಿ ಕುಟುಂಬದ ಯಜಮಾನಿಗೆ ಪ್ರತಿತಿಂಗಳು 2 ಸಾವಿರ ರೂ., 200 ಯುನಿಟ್‌ವರೆಗೆ ಉಚಿತ ವಿದ್ಯುತ್ ಮತ್ತು ನಿರುದ್ಯೋಗ ಪದವೀಧರರಿಗೆ ಭತ್ಯೆಯನ್ನು ಸಹ ನೀಡಲಾಗುವುದು ಎಂದರು.