ಕಾಂಗ್ರೆಸ್ ಸರ್ಕಾರದಿಂದ ಸಂವಿಧಾನ ವಿರೋಧಿ, ಮಹಿಳಾ ವಿರೋಧಿ ಆಡಳಿತ: ನಾಯ್ಕ ಕಿಡಿ


ಹುಬ್ಬಳ್ಳಿ,ನ.9: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂವಿಧಾನ ವಿರೋಧಿ ಮತ್ತು ಮಹಿಳಾ ವಿರೋಧಿ ಆಡಳಿತ ನಡೆಸುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಾಂಗಲ್ಯ ಮತ್ತು ಕಾಲುಂಗುರುಗಳು ತೆಗೆಯುವಂತೆ ಮಾಡುವ ಮೂಲಕ ಭಾರತದ ನಾರಿಯರಿಗೆ ಮಾಡಿದ ಅವಮಾನವಾಗಿದೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಧೋರಣೆ ಮತ್ತೊಮ್ಮೆ ಅನಾವರಣಗೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯ್ಕ ಕಿಡಿಕಾರಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಾರ ನಡೆದ ಕೆಪಿಎಸ್‍ಇ ಪರೀಕ್ಷೆ ವೇಳೆ ಗುಲಬರ್ಗಾದಲ್ಲಿ ಪರೀಕ್ಷೆಗೆ ಬಂದ ಮಹಿಳೆಯರ ತಾಳಿ, ಕಾಲುಂಗುರ ತೆಗೆಸುತ್ತಾರೆ. ಹಿಂದುತ್ವ, ಹಿಂದೂ ಸಂಸ್ಕೃತಿಗೆ ಈ ಸರ್ಕಾರ ಬೆಲೆ ಕೊಡುತ್ತಿಲ್ಲ. ಹಿಂದೂ ಮಹಿಳೆಯರ ಮಾಂಗಲ್ಯ ತೆಗೆಸುವ ದುಸ್ಸಾಹಸದ ಸರ್ಕಾರದ ಮನಸ್ಥಿತಿ ಏನೂ ಎಂಬುದು ಅರ್ಥವಾಗುತ್ತದೆ. ಅಲ್ಪ ಸಂಖ್ಯಾತರ ತುಷ್ಟಿಕರಣ ಮಾಡುವ ಕಾಂಗ್ರೆಸ್ ಸರ್ಕಾರ ಪರೀಕ್ಷೆಯಲ್ಲಿ ಹಿಜಾಬ್ ಧರಿಸಲು ಅವಕಾಶ ಮಾಡಿಕೊಟ್ಟು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಬಳಿಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಮಹಿಳಾ ವಿರೋಧಿ ಧೋರಣೆಗಳು ಕಾಣಿಸುತ್ತದೆ. ಈ ಹಿಂದೆ ಸಚಿವ ಪ್ರಿಯಾಂಕ ಖರ್ಗೆ ಮಹಿಳೆಯರು ಸರ್ಕಾರಿ ಕೆಲಸ ಪಡೆಯಲು ಮಂಚ ಹತ್ತಬೇಕು ಎಂಬ ಹೇಳಿಕೆ ಕೊಟ್ಟಿದ್ದರು. ಈ ಮೂಲಕ ಮಹಿಳಾ ಸಮೂದಾಯಕ್ಕೆ ಅವಮಾನ ಮಾಡುವ ಕೆಲಸ ಮಾಡಿದರು. ಇದೀಗ ಮಹಿಳೆಯರು ತಾಳಿ, ಕಾಲುಂಗುರ ತೆಗೆಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಇಂತಹ ಅವಮಾನಕ್ಕೆ ಮಹಿಳೆಯರು ಭವಿಷ್ಯದಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ಮುಖಂಡ ಅಧೀರ್ ರಂಜನ್ ಚೌಧರಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆದು ಅವಮಾನ ಮಾಡಿದ್ದರು. ಬುಡಕಟ್ಟು ಸಮೂದಾಯ, ಮಹಿಳೆಯರು, ಬಡವರು ಮತ್ತು ದೀನದಲಿತರನ್ನು ಅವಮಾನಿಸುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದವರಿಗೆ ರಕ್ತಗತವಾಗಿದೆ. ಚುನಾವಣೆ ಎಂದರೆ ಸೌಂದರ್ಯ ಸ್ಪರ್ಧೆಯಲ್ಲ, ಅದು ಸಿದ್ದಾಂತಗಳ, ಪ್ರಣಾಳಿಕೆಗಳ ನಡುವಿನ ಸ್ಪರ್ಧೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ ರಮೇಶ ಹೇಳಿದ್ದರು. ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮೆರೆಯುತ್ತಿರುವ ಮಹಿಳೆಯರನ್ನು ಸೌಂದರ್ಯ ಸ್ಪರ್ಧೆಗೆ ಸೀಮಿತಗೊಳಿಸುವ ಸಂಕುಚಿತ ಬುದ್ದಿ ಮತ್ತು ಸಂಸ್ಕಾರವು ಕಾಂಗ್ರೆಸ್ ಪಕ್ಷದ ನಾಯಕರಲ್ಲಿದೆ ಎಂಬುದಕ್ಕೆ ಇವುಗಳು ಸಾಕ್ಷಿಯಾಗಿವೆ ಎಂದು ಹರಿಹಾಯ್ದರು.
ಮಹಿಳಾ ಮೀಸಲಾತಿ ಅನುಷ್ಠಾನ ವಿಚಾರದಲ್ಲೂ ಕಾಂಗ್ರೆಸ್ ಅನಗತ್ಯ ವಿಳಂಬ ಮಾಡಿತ್ತು. ಆದರೆ ಬಿಜೆಪಿ ಇದನ್ನು ಜಾರಿಗೊಳಿಸಲು ಮುಂದಾದಾಗ 10 ವರ್ಷಗಳ ಹಿಂದೆಯೇ ಮಹಿಳಾ ಮೀಸಲಾತಿ ಜಾರಿ ಆಗಬೇಕಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದರು. ಅದರಂತೆ ಇದೀಗ ಕಾಂಗ್ರೆಸ್ ಸರ್ಕಾರ ತಮ್ಮ ಮಹಿಳಾ ವಿರೋಧಿ ನೀತಿಯಿಂದ ವಾಪಾಸ್ ಬಂದು ಪರೀಕ್ಷೆಗಳಲ್ಲಿ ತಾಳಿ, ಕಾಲುಂಗುರ ತೆಗೆಯುವುದನ್ನು ನಿಲ್ಲಿಸಬೇಕು. ಮಹಿಳೆಯರಿಗೆ ಗೌರವ ನೀಡುವ ಕೆಲಸವನ್ನು ಕಾಂಗ್ರೆಸ್ ಮಾಡಬೇಕು. ಇಲ್ಲದೇ ಹೋದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜೇಶ್ವರಿ, ಮೇನಕಾ ಹುರಳಿ, ರವಿ ನಾಯಕ ಇದ್ಷರು.